ಮೈಸೂರು: ವಿಪಕ್ಷ ನಾಯಕ ಸಿದ್ದರರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದಿರುವುದರ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಕೈ ವಾಡವಿದೆ. ಹೀಗಾಗಿ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆಗ್ರಹಿಸಿದ್ದಾರೆ.
ಇಂದು ನಗರದ ಪತ್ರಕರ್ತರ ಭನವದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲಿನ ದಾಳಿ ಸರ್ಕಾರದ ಪ್ರಾಯೋಜಿತವಾಗಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದೂ ಒತ್ತಾಯಿಸಿದರು.
ಶಾಂತಿಪ್ರಿಯರ ನಾಡು ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ, ಕೊಲೆ, ಸುಲಿಗೆ ಹೆಚ್ಚಾಗಿದೆ. ಸರಣಿ ಪ್ರತಿಭಟನೆಗಳ ಮುನ್ಸೂಚನೆ ಇದ್ದರೂ ಗೃಹಸಚಿವರು ಘಟನೆ ತಡೆಯಲು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಇನ್ನು ಕೊಡಗಿನಲ್ಲಿ ಆದ ಅಪಮಾನ ಕೇವಲ ಸಿದ್ದಾರಮಯ್ಯ ಅವರಿಗೆ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ದೊಡ್ಡ ಹಾನಿ. ಹೀಗಾಗಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಗೃಹಸಚಿವರು ರಾಜೀನಾಮೆ ನೀಡಬೇಕು.ನೀಡದಿದ್ದರೆ ರಾಜ್ಯಪಾಲರೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಕೊಡಗು ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಅವರ ಕಾರಿನ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಇದು ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯ ಎತ್ತಿ ತೋರಿಸುತ್ತದೆ. ಸರ್ಕಾರಕ್ಕೆ ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ದುರದೃಷ್ಟಕರ ಬೆಳವಣಿಗೆ ಎಂದರು.
ಘಟನೆ ಖಂಡಿಸಿ ಆ.26ರಂದು ಕೊಡಗು ಚಲೋ ನಡೆಸಲಾಗುತ್ತಿದ್ದು, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದು, ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿಯಂತೆ ಹೇಡಿಗಳ ಕೃತ್ಯ ಮಾಡುವುದಿಲ್ಲ ಎಂದು ತಿಳಿಸಿದರು.
ಕೊಡಗು ವೀರರ ನಾಡು. ಪ್ರತಿ ಮನೆಯಲ್ಲೂ ಯೋಧರಿದ್ದಾರೆ. ಆದರೆ, ಅಂತಹ ವೀರ ಸಂಸ್ಕೃತಿಗೆ ಧಕ್ಕೆ ತರುವ ಹೇಡಿ ಕೃತ್ಯವನ್ನು ಬಿಜೆಪಿ ಪುಂಡರು ಮಾಡಿದ್ದಾರೆ. ಕೊಡಗಿನ ಪ್ರತಿ ಮನೆಯಲ್ಲೂ ಪುಂಡರನ್ನು ಹುಟ್ಟುಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕರ್ನಾಟಕ ಅಭಿವೃದ್ಧಿಯದಲ್ಲಿ ಕೊನೆ ಸ್ಥಾನದಲ್ಲಿದೆ. ಆದರೆ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಕೊಟ್ಟ 600 ಭರವಸೆಗಳಲ್ಲಿ ಈಡೇರಿರುವುದು ಕೇವಲ ಶೇ.9ರಷ್ಟು ಮಾತ್ರ. ಇನ್ನು ಅಭಿವೃದ್ಧಿ ಶೂನ್ಯವಾಗಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ 2018ರಿಂದಲೂ ಹೆಚ್ಚು ಮಳೆಯಾಗುತ್ತಿದ್ದು, ಹಾನಿಯೂ ಹೆಚ್ಚಾಗಿದೆ. ಸೂಕ್ತ ಅನುದಾನ ನೀಡಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಘಟನೆ ಹಿಂದೆ ಸರ್ಕಾರದ ಕುಮ್ಮಕ್ಕಿದ್ದು, ಇಂತಹ ಬೆದರಿಕೆಗಳಿಗೆ ಸಿದ್ದರಾಮಯ್ಯ ಹೆದರುವುದಿಲ್ಲ. ಸೈದ್ಧಾಂತಿಕ ಹೋರಾಟಕ್ಕೆ ಹಿಂಸಾತ್ಮಕ ರೂಪ ನೀಡಿರುವುದು ಖಂಡನೀಯ. ಇದು ಬಿಜೆಪಿಯಯವರ ಬೌದ್ಧಿಕ ದಿವಾಳಿತ ತೋರಿಸುತ್ತದೆ. ವಿಪಕ್ಷ ನಾಯಕರಿಗೆ ಭದ್ರತೆ ನೀಡಲಾಗದ ಸರ್ಕಾರ ಜನರಿಗೆ ಹೇಗೆ ನೀಡುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಒಬಿಸಿ ಘಟಕದ ಅಧ್ಯಕ್ಷ ಮಾರುತಿ ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)