NEWSಸಿನಿಪಥ

ಇಂದು ಡಾ. ರಾಜ್‍ಕುಮಾರ್ ಜನ್ಮದಿನಾಚರಣೆ

ವರನಟ, ಬಂಗಾರದ ಮನುಷ್ಯ ಡಾ. ರಾಜ್ ಸವಿ ನೆನಪು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬಿ, ತನ್ನ ಅದ್ಭುತ ನಟನೆಯ ಮೂಲಕ ರಾಜ್ಯಾದ್ಯಂತ ಅಣ್ಣಾವ್ರು ಎಂದೇ ಪ್ರಖ್ಯಾತಿ ಪಡೆದು. ತಮ್ಮ ವಿನಯತೆ, ಸರಳ ಸಜ್ಜನಿಕೆಯಿಂದ ಕೋಟ್ಯಾಂತರ ಸಿನಿ ಭಕ್ತರ ಜನಮಾನಸದಲ್ಲಿ ಅಚ್ಚಳಿಯಾಗಿಯೇ ಉಳಿದಿರುವ ಡಾ. ರಾಜ್‍ಕುಮಾರ್ ಅವರ 91 ನೇ ಜನ್ಮದಿನೋತ್ಸವದ ಸಂಭ್ರಮದಲ್ಲಿದ್ದೇವೆ.

ರೌದ್ರಪಾತ್ರಗಳಿಗೆ ಹೆಸರಾಗಿದ್ದ ಚಾಮರಾಜನಗರ ಜಿಲ್ಲೆಯ ಗಾಜನೂರು ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ ರಾಜ್‍ಕುಮಾರ್ 1929 ರ ಏಪ್ರಿಲ್ 24 ರಂದು ಜನಿಸಿದರು. ಇವರ ಜನ್ಮನಾಮ ಮುತ್ತುರಾಜ್.  ಗುಬ್ಬಿ ನಾಟಕ ಕಂಪನಿಯಲ್ಲಿ ತಂದೆಯ ಮಾರ್ಗದರ್ಶನದ ಮೇರೆಗೆ ಹಲವಾರು ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುವುದರ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಅಭಿಮಾನಿಗಳ ನೆಚ್ಚಿನ ನಟರಾದರು. ನಂತರ ಭಕ್ತ ಕನಕದಾಸ, ಭಕ್ತ ಪ್ರಹ್ಲಾದ, ಸತ್ಯಹರಿಶ್ಚಂದ್ರ, ಶ್ರೀಕೃಷ್ಣದೇವರಾಯ, ಬಬ್ರುವಾಹನದಂತಹ ಪೌರಾಣಿಕ ಪಾತ್ರಗಳಲ್ಲಿ  ಡಾ. ರಾಜ್ ಅಭಿನಯಿಸಿದ್ದಾರೆ. ಜೇಡರಬಲೆ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕೊನೆಯ ಚಿತ್ರ 2000 ನೇ ಸಾಲಿನಲ್ಲಿ ತೆರೆಕಂಡ ಶಬ್ದವೇದಿ ಚಿತ್ರದಲ್ಲಿ ಮಾದಕ ವಸ್ತುಗಳಿಂದ ಸಮಾಜಕ್ಕಾಗುವ ದುಷ್ಪರಿಣಾಮದ ವಿರುದ್ಧ ಹೋರಾಡುವ ಒಬ್ಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೇ ಹಿನ್ನೆಲೆ ಗಾಯನಕ್ಕೂ ಪ್ರಸಿದ್ಧಿ ಪಡೆದಿದ್ದಾರೆ. 1974 ರಲ್ಲಿ ತೆರೆಕಂಡ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಜೀವನಚೈತ್ರ ಸಿನಿಮಾದಲ್ಲಿ ಇವರು ಹಾಡಿರುವ ‘ನಾದಮಯ’ ಗಾಯನಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

2000 ರಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ ಅವರಿಂದ ಅಪಹರಣಕ್ಕೊಳಗಾಗಿ 108 ದಿನ ವೀರಪ್ಪನ್‍ನ ಒತ್ತೆಯಾಳಾಗಿ ವಶದಲ್ಲಿದ್ದರು.

1995 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ. ಅಮೆರಿಕಾ ಸಂಸ್ಥಾನದಿಂದ 1985 ರಲ್ಲಿ ಕೆಂಟಕಿ ಕರ್ನಲ್ ಗೌರವ ಪಡೆದಿರುವ ಏಕೈಕ ಭಾರತೀಯ ಇವರು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ, 1983 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ನಟಸಾರ್ವಭೌಮ, ಗಾನಗಂಧರ್ವ, ವರನಟ, ರಸಿಕರರಾಜ, ಕನ್ನಡದ ಕಣ್ಮಣಿ, ಮೇರುನಟ ಸೇರಿದಂತೆ ಹಲವಾರು ಬಿರುದಾಂಕಿತಗಳನ್ನು ಹೊಂದಿದ್ದಾರೆ. ಡಾ. ರಾಜ್‍ಕುಮಾರ್ 2006 ರ ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಇವರು ಇಂದಿಗೂ ಅಣ್ಣಾವ್ರು ಎಂದೇ ಜನಮಾನಸದಲ್ಲಿದ್ದಾರೆ.

Leave a Reply