NEWSಶಿಕ್ಷಣ-

ಊರಿಗೆ ತೆರಳಿದ ಮಕ್ಕಳಿಗೆ ಅಲ್ಲೇ SSLC ಪರೀಕ್ಷೆಗೆ ಅನುವುಮಾಡಿಕೊಡಿ

ಅಧಿಕಾರಿಗಳಿಗೆ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು  ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ   ಪ್ರಾರಂಭಿಸಬೇಕೆಂದು ಪ್ರಾಥಮಿಕ ಮತ್ತು  ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದವನ್ನು ಸಚಿವರು ನಡೆಸಿದರು. ಎಲ್ಲ ಜಿಲ್ಲೆಗಳಿಂದ ಬಂದ ಒಟ್ಟಾಭಿಪ್ರಾಯದಂತೆ ಮಕ್ಕಳು ತಮ್ಮ ಪರೀಕ್ಷಾ  ದಿನಾಂಕ ತಿಳಿಯಲು ಉತ್ಸುಕರಾಗಿದ್ದು  ಮತ್ತು ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ   ಪರೀಕ್ಷಾ ಕೇಂದ್ರಗಳಲ್ಲಿ  ಕೊರೊನಾ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು  ಸೂಚಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ಜಿಲ್ಲೆಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು    ಅಭಿಪ್ರಾಯ ಪಡೆದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವ ಈ ದಿನಮಾನಗಳಲ್ಲಿ ಮಕ್ಕಳ ಮಾನಸಿಕ  ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಿದ್ಧತೆಯನ್ನು ಜಾರಿಯಲ್ಲಿಡಬೇಕೆಂದು ಸೂಚಿಸಿದರು.

ಮಾಸ್ಕ್ , ಸ್ಯಾನಿಟೈಜರ್ ಹಾಗೂ ಜ್ವರ ತಪಾಸಣೆ ಕಡ್ಡಾಯ: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ  ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ  ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.   ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.

ಆಂಗ್ಲ ಮಾಧ್ಯಮ ಪುನರ್ಮನನ ತರಗತಿಗಳ ಪ್ರಾರಂಭ
ಶಿಕ್ಷಣ ಇಲಾಖೆ ಚಂದನವಾಹಿನಿಯಲ್ಲಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸುತ್ತಿದ್ದು, ಈ ವಾರದಿಂದಲೇ  ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಇಲಾಖೆಯ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ನಲ್ಲಿಯೂ ಸಹ ಪುನರ್ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಎಸ್ಎಸ್ ಎಲ್ ಸಿ ಪರೀಕ್ಷೆ  ಕುರಿತು ಮಕ್ಕಳಲ್ಲಿ ಅನುಮಾನಗಳಿದ್ದರೆ ಪರೀಕ್ಷೆ ಇಷ್ಟರಲ್ಲೇ ನಡೆಯಲಿದೆ ಎಂಬ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಬೇಕೆಂದು  ಸಚಿವರು ಡಿಡಿಪಿ ಐಗಳಿಗೆ ಸೂಚಿಸಿದರು.

ಪರೀಕ್ಷೆ ಸಿದ್ಧತೆಗೆ ಸಮಯ
ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ವಿಷಯವಾರು  ಅವಶ್ಯಕ  ಅಂತರವನ್ನು   ಕಾಪಾಡಿಕೊಳ್ಳಲು ಯೋಜನೆ ರೂಪಿಸಬೇಕೆಂದು ಇಲಾಖಾ ಆಯುಕ್ತರಿಗೆ ಸೂಚಿಸಿದ ಸುರೇಶ್ ಕುಮಾರ್, ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕೆಂದು ಸೂಚಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಡಿಡಿಪಿಐಗಳೊಂದಿಗೆ ಪ್ರಾಥಮಿಕ ಮತ್ತು  ಪ್ರೌಢಶಿಕ್ಷಣ ಶಿಕ್ಷಣ  ಸಚಿವ ಎಸ್ ಸುರೇಶ್ ಕುಮಾರ್ ವಿಡಿಯೋ ಸಂವಾದ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ವಿಡಿಯೋ ಸಂವಾದ ಸಂದರ್ಭದಲ್ಲಿ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...