ಚಿಕ್ಕೋಡಿ: ಖಾಸಗಿ ಕಾಲೇಜು ಬಸ್ ಮತ್ತು ಲಾರಿ ನಡುವೆ ಇಂದು ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಚಾಲಕರು ಮೃತಪಟ್ಟಿದ್ದು ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದ ಅಪಘಾತದಲ್ಲಿ ಲಾರಿ ಚಾಲಕ ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದ ನಿವಾಸಿ ಮಲ್ಲಿಕ್ ಮುಜಾವರ್ (40) ಹಾಗೂ ಕಾಲೇಜು ಬಸ್ ಚಾಲಕ ಅಥಣಿ ನಿವಾಸಿ ರಘುನಾಥ್ ಅವತಾಡೆ (45) ಇಬ್ಬರು ಸ್ಥಳದಲ್ಲೆ ಅಸುನೀಗಿದ್ದಾರೆ.
ಎರಡು ವಾಹನಗಳ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಅಥಣಿ ಹೊರವಲಯದಲ್ಲಿನ ಬನಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ್ದ ಕಾಲೇಜು ಬಸ್‍ನಲ್ಲಿದ್ದ 75 ವಿದ್ಯಾರ್ಥಿನಿಯರು ಹಾಗೂ 3 ಜನ ಸಿಬ್ಬಂದಿಗಳಲ್ಲಿ 39 ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಲೇಜು ಬಸ್ ಹಾಸ್ಟೆಲ್‍ನಿಂದ ಕಾಗವಾಡ – ವಿಜಯಪುರ ಹೆದ್ದಾರಿ ಪಕ್ಕದ ಕಾಲೇಜಿನ ಗೇಟ್ ಒಳಗಡೆ ಹೋಗಲು ತಿರುಗುತ್ತಿದ್ದಾಗ ಲಾರಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ 39ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಾಲಗಿದೆ.
ಓರ್ವ ಶಿಕ್ಷಕಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿಗೆ ರವಾನಿಸಲಾಗಿದೆ ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಆದರೆ, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಪರಿಶೀಲನೆ ನಡೆಸಿದರು. ಬಸ್‌ನಲ್ಲಿ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿನಿಯರನ್ನು ಕರೆತರಲಾಗುತ್ತಿತ್ತು ಎನ್ನುವ ಆರೋಪ ಬಂದ ಹಿನ್ನೆಲೆಯಲ್ಲಿ ಅಥಣಿಯ ಎಲ್ಲ ಶಾಲಾ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)