NEWSನಮ್ಮಜಿಲ್ಲೆರಾಜಕೀಯ

ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಶುಕ್ರವಾರ  ನಡೆದ ಪ್ರಶ್ನೋತ್ತರ ವೇಳೆ ಬಿ.ಜಿ.ಪಾಟೀಲ್  ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ 4 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯ 7 ಕಾಮಗಾರಿಗಳು ಮತ್ತು ಯಾದಗಿರಿ ಜಿಲ್ಲೆಯ 5 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿಗಳನ್ನು ಪ್ರಸ್ತುತ ವಾರ್ಷಿಕ ನಿರ್ವಹಣೆಯ ಹಂತದಲ್ಲಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ರಸ್ತೆಗಳು ಪ್ರಸ್ತುತ ವಾರ್ಷಿಕ ಕಾರ್ಯ ನಿರ್ವಹಣೆಯ ಹಂತದಲ್ಲಿರುವುದರಿಂದ ಯಾವುದೇ ಕಾಮಗಾರಿಗಳು ಹದಗೆಟ್ಟಿಲ್ಲ. 2016-17ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈಗಾಗಲೇ ನಿರ್ಮಿಸಲಾಗಿರುವ ರಸ್ತೆಗಳನ್ನು ಪುನರ್ ಡಾಂಬರೀಕರಣ ಮಾಡಲು ಪ್ರೋತ್ಸಾಹ ಧನ ನೀಡಲಾಗಿದೆ. ಎಂದರು.

ಕಲಬುರಗಿ ಜಿಲ್ಲೆಯಲ್ಲಿ 5 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಪೂರ್ಣಗೊಂಡಿವೆ. 2019-20ನೇ ಸಾಲಿಗೆ 11 ಕಾಮಗಾರಿಗಳು ಅನುಮೋದನೆಗೊಂಡಿದ್ದು ಅಂದಾಜು ಪಟ್ಟಿಗೆ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ -3 ರಡಿ ಕಲಬುರಗಿ ಜಿಲ್ಲೆಗೆ 260 ಕಿ.ಮೀ ಉದ್ದದ ರಸ್ತೆ, ಯಾದಗಿರಿ ಜಿಲ್ಲೆಗೆ 132 ಕಿ.ಮೀ ಉದ್ದದ ರಸ್ತೆಗಳು ಹಂಚಿಕೆಯಾಗಿವೆ.  ಜಿಲ್ಲೆಯಲ್ಲಿ 214.648 ಕಿ.ಮೀ ಮತ್ತು ಯಾದಗಿರಿ ಜಿಲ್ಲೆಯಲ್ಲಿ 55.25 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳ ಡಿ.ಪಿ.ಆರ್. ಅಂತಿಮಗೊಂಡಿದೆ ಎಂದು ಹೇಳಿದರು.

ಬಾಕಿ ಉಳಿದಿರುವ ರಸ್ತೆಗಳ ಉದ್ದಕ್ಕೆ ಡಿ.ಪಿ.ಆರ್. ತಯಾರಿಕೆ ಹಂತದಲ್ಲಿದ್ದು ಟೆಂಡರ್ ಕರೆಯುವ ಹಂತದಲ್ಲಿವೆ. ಟೆಂಡರ್ ಕರೆದು ಅರ್ಹ ಬಿಡ್ ದಾರರಿಗೆ ಕಾರ್ಯಾದೇಶ ನೀಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

Leave a Reply