NEWSನಮ್ಮರಾಜ್ಯ

ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಕಡಿತಗೊಳಿಸುವಂತಿಲ್ಲ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಸಚಿವ ಸಿ.ಟಿ. ರವಿ ತಾಕೀತು

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ ಬಿಡುಗಡೆಯಾಗಿರುವ ಸಹಾಯ ಧನದ ಹಣವನ್ನು ಯಾವುದೇ ಬ್ಯಾಂಕ್‌ಗಳು ಸಾಲದ ಉದ್ದೇಶಕ್ಕಾಗಿ ಕಡಿತ ಮಾಡಬಾರದು, ಕಡಿತ ಮಾಡಿದಲ್ಲಿ ಅಂತಹ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.

ಲಕ್ಯಾ, ಹಿರೇಗೌಜ, ಬಿಳೆಕಲ್ಲಳ್ಳಿ, ಲಕ್ಕಮ್ಮನಹಳ್ಳಿ, ಹುಲಿಕೆರೆ, ನಿಡಘಟ್ಟ, ನಾಗರಾಳು, ಜೋಡಿಹೋಚಿಹಳ್ಳಿ, ದೇವನೂರು, ಚಿಕ್ಕದೇವನೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೊರೊನಾ ಸೋಂಕು ನಿಯಂತ್ರಣ ಕ್ರಮದ ಕುರಿತು ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊರೊನಾ ಸೋಂಕು ಜಗತ್ತಿನಾದ್ಯಂತ ಆವರಿಸಿದ್ದು ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆ-ಮನೆಗಳಿಗೆ ಭೇಟಿ ನೀಡಿ ಕೊರೊನಾ ಸೋಂಕಿನ ಕುರಿತು ಮಾಹಿತಿ ಸಂಗ್ರಹಿಸಿ, ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಆಶಾ ಕಾರ್ಯಕರ್ತೆಯರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರಿದ್ದಲ್ಲಿ ಗುರುತಿಸಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ  ಅಂತವರಿಗೆ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿ ಹೋಮ್ ಕ್ವಾರಂಟೈನ್‌ಗಳಲ್ಲಿ ಇರುವಂತೆ ಸಲಹೆ ನೀಡಬೇಕು, ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರೂ ಸುರಕ್ಷಾ ಸಾಧನಗಳಾದ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಳಸುವಂತೆ ತಿಳಿಸಿದರು.

ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿ ಹಣ ಬಿಡುಗಡೆಯಾಗಿದ್ದು, ಕೆಲ ಬ್ಯಾಂಕುಗಳಲ್ಲಿ ಆ ಹಣವನ್ನು ಸಾಲಕ್ಕಾಗಿ ಕಡಿತ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಹಾಗಾಗಿ ಅದಕ್ಕೆ ಅವಕಾಶವಿಲ್ಲ. ಅಂತಹ ದೂರುಗಳು ಕಂಡು ಬಂದಲ್ಲಿ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಎನ್.ಆರ್.ಇ.ಜಿ ಯೋಜನೆ ಅಡಿ ಸರ್ಕಾರದಿಂದ ಹಣ ಬಿಡುಗಡೆಯಾಗಲಿದ್ದು ಕೆಲಸ ನಿರ್ವಹಿಸಿದವರ ಮಾಹಿತಿಯನ್ನು ಕಂಪ್ಯೂಟರ್‌ಗಳಲ್ಲಿ ಫೀಡ್ ಮಾಡಿದರೆ ಅವರ ಖಾತೆಗಳಿಗೆ ಕೆಲವೇ ದಿನಗಳಲ್ಲಿ ಹಣ ಜಮಾ ಆಗುವುದು ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುವ ಪ್ರತಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು ಹಾಗೂ ವೈಯಕ್ತಿಕ ಕೆಲಸಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಕೊಟ್ಟಿಗೆ ನಿರ್ಮಾಣ, ಹಾಗೂ ಇಂಗು ಗುಂಡಿಗಳಂತಹ ಕೆಲಸವಿದ್ದಲ್ಲಿ ಅವಕಾಶ ನೀಡಬೇಕು ಕೃಷಿ ಚಟುವಟಿಕೆಗಳು, ಆಹಾರೋತ್ಪನ್ನ ಮಾರಾಟ ಹಾಗೂ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು.

ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ, ವಿದ್ಯುತ್ ಸಂಪರ್ಕಕ್ಕೆ ಯಾವುದೇ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ  ಸಕಾಲಕ್ಕೆ ತ್ರಿ ಫೇಸ್ ವಿದ್ಯುತ್ ಅನ್ನು ಒದಗಿಸಬೇಕು ಎಂದರು.

ಪ್ರತಿ ಗ್ರಾಮಗಳಲ್ಲಿಯೂ ಜನರು ವೈಯಕ್ತಿಕ ಹಾಗೂ ಸಮುದಾಯ ಸ್ವಚ್ಚತೆಯನ್ನು ಕಾಪಾಡುವುದರ ಮೂಲಕ ಗುಂಪು ಗುಂಪಾಗಿ ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರೂ  ಸರ್ಕಾರದೊಂದಿಗೆ ಕೈ ಜೋಡಿಸಬೇಕು ಜೊತೆಗೆ ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ, ತಾಲೂಕು ಪಂಚಾಯಿತಿ ಸದಸ್ಯ ಮಹೇಶ್, ತಹಸೀಲ್ದಾರ್ ನಂದಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ ರೇವಣ್ಣ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ್ ಕಳಾಸಪುರ ವೈದ್ಯಾಧಿಕಾರಿ ಡಾ.ಕಾರ್ತಿಕ್, ಮೆಸ್ಕಾಂನ ಕಾರ್ಯಪಾಲನಾ ಇಂಜಿನಿಯರ್ ಕಾರ್ತಿಕ್ ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Reply