NEWSನಮ್ಮಜಿಲ್ಲೆ

ಮಡಿಕೇರಿಯಲ್ಲಿ ಕೊರೊನಾ ವೈರಸ್ ಜಾಗೃತಿ ಅಭಿಯಾನ  

ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರರಿಂದ ಚಾಲನೆ  

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ   ಶುಕ್ರವಾರ ಚಾಲನೆ ನೀಡಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಆಟೋ ರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ, ಮನೆ ಮನೆಗೆ ಭೇಟಿ ನೀಡಿ ನಾಗರಿಕರಿಗೆ ಕರಪತ್ರ ಹಂಚುವ ಕಾರ್ಯಕ್ಕೆ ಚಾಲನೆ ನೀಡಿದರು.

ವಿಶ್ವದಾದ್ಯಂತ ಹರಡಿರುವ ಕೊರೊನ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು. ಈಗಾಗಲೇ ಸರ್ಕಾರ ಲಾಕ್ ಡೌನ್ ಮಾಡಿದ್ದು, ಅದರಂತೆ ನಡೆದುಕೊಳ್ಳಬೇಕು ಎಂದರು.

ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನಿಸ ಅವರು ಅರೆಕಾಲಿಕ ಸ್ವಯಂ ಸೇವಕರು ಹಾಗೂ ಪೆನೆಲ್ ವಕೀಲರಿಗೆ ಕರಪತ್ರ ಹಂಚುವ ಸಮಯದಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ಪೆನೆಲ್ ವಕೀಲರು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜನರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲು ತಿಳಿಸಲಾಯಿತು.

ಪೆನೆಲ್ ವಕೀಲರು ಹಾಗೂ ಅರೆಕಾಲಿಕ ಕಾನೂನು ಸ್ವಯಂ ಸೇವಕರೊಂದಿಗೆ ನಗರದ ಪೌರ ಕಾರ್ಮಿಕರು ವಾಸಿಸುವ ವಸತಿ ಪ್ರದೇಶದಲ್ಲಿ ಕರಪತ್ರ ಹಂಚಿ ಕೊರೊನ ವೈರಸ್ ತಡೆಗೆ ವಹಿಸಬೇಕಾದ ಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿದರು.

ಅಪರ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ, ಹಾಗೂ ಅಪರ ಸಿವಿಲ್ ನ್ಯಾಯಾಧೀಶರಾದ ಮನು. ಅರೆಕಾಲಿಕ ಕಾನೂನು ಸ್ವಯಂ ಸೇವಕರಾದ ಜಾಯ್ಸ, ಫಾತೀಮಾ. ಜಯಂತಿ, ರೂಪ, ಮುನೀರ್, ಶಿವಕುಮಾರ ಪೆನೆಲ್ ವಕೀಲರಾದ ಪದ್ಮ, ನಳಿನಿ ಪಾಲ್ಗೊಂಡಿದ್ದರು.

Leave a Reply