NEWSನಮ್ಮರಾಜ್ಯ

ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಒಕ್ಕೊರಲ ಬೆಂಬಲ

 ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಪ್ರತಿಪಕ್ಷಗಳು ತುಂಬು ಹೃದಯದ ಸಹಕಾರ ನೀಡುವುದಾಗಿ ಒಕ್ಕೊರಲಿನಿಂದ ಪ್ರಕಟಿಸಿ ಸರ್ಕಾರಕ್ಕೆ ತಮ್ಮ ಬೇಷರತ್ ಬೆಂಬಲ ಘೋಷಿಸಿದ ಅಪರೂಪದ ಘಟನೆಗೆ ಸರ್ವಪಕ್ಷಗಳ ಮುಖಂಡರ ಸಭೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸುಮಾರು ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ಹೊರಹೊಮ್ಮಿದ ಉಪಯುಕ್ತ ಸಲಹೆಗಳಿಗೆ ಮುಖ್ಯಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.

ಪ್ರತಿದಿನವೂ ಒಂದಲ್ಲದೊಂದು ಕಾರಣಕ್ಕೆ ಪ್ರಧಾನಿಯವರು ತಮ್ಮ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ತಮಗೆ ದೊರೆತಿದೆ ಎಂದು ಹೇಳಿದ ಮುಖ್ಯಮಂತ್ರಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು, ಮುಖವಾಡಗಳನ್ನು, ಸ್ಯಾನಿಟೈಸರ್‌ಗಳನ್ನು ಪೂರೈಸುವತ್ತ ಅಗತ್ಯ ಕ್ರ ಕೈಗೊಳ್ಳುವುದಾಗಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಎಲ್ಲಾ ರೀತಿಯ ರಕ್ಷಣಾ ಸಾಧನಾ ಸಲಕರಣೆಗಳನ್ನು ಹಾಗೂ ಪರೀಕ್ಷಾ ಉಪಕರಣಗಳನ್ನು ಒದಗಿಸುವುದಾಗಿ ಸಭೆಗೆ ಭರವಸೆ ನೀಡಿದರು.

ಸಂಚಾರ ನಿರ್ಬಂಧದಿಂದ ರಾಜ್ಯದ ಗಡಿಗಳಲ್ಲಿ ಸಂಕಷ್ಟಕ್ಕೀಡಾಗಿರುವವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ತವರಿಗೆ ಕರೆತರುವ ವ್ಯವಸ್ಥೆ ಮಾಡುವ, ಅದರಲ್ಲಿ ಸೋಂಕಿತರನ್ನು ಕ್ವಾರೆಂಟೈನ್‍ಗೆ ಕಳುಹಿಸುವ ಆರೋಗ್ಯವಂತರನ್ನು ಅವರ ಊರುಗಳಿಗೆ ಕಳುಹಿಸುವ ಮತ್ತೊಂದು ಭರವಸೆ ನೀಡಿದ ಬಿ ಎಸ್ ಯಡಿಯೂರಪ್ಪ ಅವರು ಕೃಷಿ ಉತ್ಪನ್ನಗಳ ಸಾಗಣೆ, ಮಾರಾಟ ಮತ್ತು ಬಳಕೆದಾರರಿಗೆ ವಿತರಣೆಗೂ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹಾಗೂ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಒದಗಿಸಿಕೊಡಲು ಕ್ರಮವಹಿಸುವುದಾಗಿ ನುಡಿದರು.

ಮನೆಯಲ್ಲಿಯೇ ನಮಾಜ್ ಮಾಡಲು ಒಪ್ಪಿ ಸರ್ಕಾರದೊಂದಿಗೆ ಸಹಕರಿಸಿರುವ ಮುಸ್ಮೀಮರಿಗೆ   ಅದರಲ್ಲೂ ವಿಶೇಷವಾಗಿ ಆ ಸಮುದಾಯದ ಮುಖಂಡಿರಿಗೆ, ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

ಸರ್ಕಾರಕ್ಕೆ ಪ್ರತಿಪಕ್ಷಗಳ ಸಲಹೆ

ರಾಜ್ಯದಲ್ಲೇ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳು ನಿಲ್ಲಬಾರದು. ಕೃಷಿ ಚಟುವಟಿಕೆಗಳು ನಿಂತರೆ, ಕೇವಲ ರೈತರಿಗೆ ಮಾತ್ರ ನಷ್ಟವಲ್ಲ, ನಂತರ, ಆಹಾರ ಧಾನ್ಯಗಳ ಕೊರತೆ ಉಂಟಾಗಿ  ಇದರ ಪರಿಣಾಮವನ್ನು ಎಲ್ಲರೂ  ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಎಲ್ಲಾ 6083 ಪಂಚಾಯಿತಿಳಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೃಷಿ ಇಲಾಖೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯ ಓರ್ವ ಪ್ರತಿನಿಧಿಯನ್ನು ನೇಮಕ ಮಾಡಿ, ಆ ಪ್ರದೇಶದ ಜನರ ಆರೋಗ್ಯ ಕಾಯ್ದುಕೊಳ್ಳಲು, ಮಾನಸಿಕ ಸ್ಥೈರ್ಯ ತುಂಬಲು, ಆ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡಲು ಹಾಗೂ ರೈರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಪೂರಕ ವಾತಾವರಣ ನಿರ್ಮಿಸಿ. ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸಲು ಹಾಗೂ ಕೋವಿಡ್-19 ರ ವಿರುದ್ಧ ಸಮರ ಸಾರಲು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರ್ಕಾರದಲ್ಲಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಪಡೆದಿರುವ ಹಾಗೂ 60 ವರ್ಷ ವಯೋಮಾನದೊಳಗಿನ ವೈದ್ಯರನ್ನು ಮತ್ತು ಖಾಸಗಿ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರು.

ಸಾವು-ನೋವು ಇಂತಹ ಸಕಾರಣ ಇದ್ದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸಬಾರದು. ಅನಿವಾರ್ಯ ಸಂದರ್ಭದಲ್ಲಿ ಬಲ ಪ್ರಯೋಗ ಮಾಡಬೇಕೇ ಹೊರತು ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ಅಮಾನವೀಯವಾಗಿ ವರ್ತಿಸಬಾರದು ಎಂದು ಪೊಲೀಸರಿಗೆ ಕಿವಿ ಮಾತು ಹೇಳಿದ ಸಿದ್ದರಾಮಯ್ಯ ಅವರುಪ್ರಸ್ತುತದಲ್ಲಿ ನಾವು ಎದುರಿಸುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ. ಆರೋಗ್ಯ ಸಮಸ್ಯೆ ಎಂಬುದನ್ನು ಪೊಲೀಸರು ಮನಗಾಣಬೇಕು ಎಂದು ತಾಕೀತು ಮಾಡಿದರು.

ರಾಮನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಜನತೆಗೆ ಒದಗಿಸಲು ತಾವು ವೈಯಕ್ತಿಕವಾಗಿ ಹತ್ತು ಸಾವಿರ ಮಾಸ್ಕ್‍ಗಳನ್ನು ಖರೀದಿಸಿ ನೀಡಿರುವುದಾಗಿ ತಿಳಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,  ಇನ್ನೂ 50,000  ಮಾಸ್ಕ್‌ಗಳ ಖರೀದಿಸಿ ಒದಗಿಸಲು ಮುಂದಾಗಿರುವುದಾಗಿ ಪ್ರಕಟಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ತಾವು ಇರುವುದಾಗಿ ಪ್ರಕಟಿಸಿದ ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು ಸೋಂಕು ತಗುಲೀತು ಎಂಬ ಕಾರಣಕ್ಕೆ ರಾಜ್ಯದ ರಾಜಧಾನಿಗೆ ವಲಸೆ ಬಂದಿರುವ ಲಕ್ಷಾಂತರ ಜನಕ್ಕೆ ಇದೀಗ ತಮ್ಮ ಸ್ವಂತ ಊರುಗಳು ನೆನಪಾಗಿದೆ. ಆದರೆ, ಅವರನ್ನು ಊರಿಗೆ ಸೇರಿಸಿಕೊಳ್ಳಲು ಗ್ರಾಮಸ್ಥರೂ ಭಯಪಡುತ್ತಿದ್ದಾರೆ. ಇಂತಹ ತ್ರಿ-ಶಂಕು ಸ್ಥಿತಿಯಲ್ಲಿರುವವರ ನೆರವಿಗೆ ಸರ್ಕಾರ ಮುಂಬರಬೇಕು. ವಲಸಿಗರ ಆರೋಗ್ಯ ತಪಾಸಣೆ ನಡೆಸಿ, ಅವರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.

ಜಾತ್ಯತೀತ ಜನತಾ ದಳದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ಓರ್ವ ಸಚಿವರು ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧಿಕೃತ ಮತ್ತು ನಿಖರ ಮಾಹಿತಿಯನ್ನು ಮಾಧ್ಯಮಗಳಿಗೆ ಕಾಲಕಾಲಕ್ಕೆ ನೀಡುವಂತಾಗಬೇಕು. ಇದರಿಂದ ವದಂತಿಗಳನ್ನು ದೂರಮಾಡಬಹುದು. ಅಲ್ಲದೆ, ಅತಿರಂಜಿತ ವರದಿಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲದ ಹಾಗೂ ಶುಶ್ರೂಷಕರಿಲ್ಲದ ಆಸ್ಪತ್ರೆಗಳಿವೆ. ಬಡವರು ಅವಲಭಿಸಿರುವ ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯಾವಶ್ಯಕವಾದ ಈ ಹುದ್ದೆಗಳನ್ನು ಭರ್ತಿ ಮಾಡಿ ಎಂದ ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರ ಸ್ವಾಮಿ ಅವರು ಕಾಫಿ ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡುತ್ತಿರುವ ಕಾಫಿ ತೋಟದ ಕಾರ್ಮಿಕರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರ ಅನುವುಮಾಡಿಕೊಡಬೇಕು ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿತರಿಸಲಾಗುತ್ತಿದ್ದ ಪಿಂಚಣ ಗಳನ್ನು ಖಜಾನೆ-1 ತಂತ್ರಾಂಶದಿಂದ ಖಜಾನೆ-2 ತಂತ್ರಾಂಶಕ್ಕೆ ಪರಿವರ್ತಿಸಿರುವುದರಿಂದ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ¨ಪಿಂಚಣ  ತಲುಪಿಲ್ಲ ಎಂಬ ಅಂಶವನ್ನು ಸರ್ಕಾರದ ಗಮನಸೆಳೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ  ಕೆ.ಆರ್. ರಮೇಶ್ ಕುಮಾರ್, ಬಡವರಿಗೆ ಸಕಾಲದಲ್ಲಿ ಪಿಂಚಣ ದೊರಕಿಸಿಕೊಡಲು ಹಳೆಯ ಪದ್ಧತಿಯನ್ನು ಮುಂದುವರೆಸುವಂತೆಯೂ ಹಾಗೂ ಪ್ರಸ್ತುತ ನೀಡುತ್ತಿರುವ ಪಿಂಚಣ  ಮೊತ್ತವನ್ನು 500 ರೂ. ನಿಂದ ಒಂದು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆಯೂ ಮನವಿ ಮಾಡಿದರು.

Leave a Reply

error: Content is protected !!
LATEST
ಅನ್ನವೂ ಹಳಸಿತ್ತು- ನಾಯಿಯೂ ಹಸಿದಿತ್ತು : ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಬಿಜೆಪಿ ಸೇರುತ್ತಾರ ಸುಪ್ರೀಂಕೋರ್ಟ್‌, ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿ ಉದ್ಘಾಟನೆ ನನ್ನ ರಾಜ್ಯದ ಬರಗಾಲದ ಬವಣೆ, ರೈತರ ಸಂಕಷ್ಟ ತಪ್ಪಿಸಿ: ಸಿಎಸ್‌ಒಗೆ ರೈತ ಮುಖಂಡರ ನಿಯೋಗ ಒತ್ತಾಯ ಕೊಡಗು: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಬಲಿಯಾದ ಕಾಫಿ ಬೆಳೆಗಾರ ಮೈಸೂರು: ಬಿಸಿಲ ಝಳದಿಂದ ಬಳಲಿ ಮಡಕೆ ಫಿಲ್ಟರ್‌ಗಳ ಮೊರೆ ಹೋಗುತ್ತಿರುವ ಜನತೆ ಆಧುನಿಕ ಜೀವನ ಶೈಲಿಯಿಂದ ಹೊರಬಂದರೆ ಉತ್ತಮ ಆರೋಗ್ಯ : ಶ್ರೀ ಸೌಮ್ಯನಾಥ ಸ್ವಾಮೀಜಿ ಅಭಿಮತ MP ಚುನಾವಣೆ: 706 ಮಂದಿ ಮನೆಯಿಂದಲೇ ಮತದಾನ - ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಐಪಿಎಲ್  ಕ್ರಿಕೆಟ್: ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಎಂಟಿಸಿ ಬಸ್ ವ್ಯವಸ್ಥೆ ಪ್ರತಿಭಟನೆ ಬಳಿಕ ಗ್ರಾಮಗಳಿಗೆ ನೀರಿನ ಸಮಸ್ಯೆ ಪರಿಹರಿಸಿದ ಮಹದೇಶ್ವರಬೆಟ್ಟ ಗ್ರಾಪಂ