NEWSನಮ್ಮಜಿಲ್ಲೆ

ಕ್ವಾರಂಟೈನ್ ವ್ಯಕ್ತಿ ಹೊರಗೆ ಬಂದರೆ ಪ್ರಕರಣ ದಾಖಲಿಸಲು: ಬೆಳಗಾವಿ ಡಿಸಿ ಎಚ್ಚರಿಕೆ

ಕೊರೊನಾ ನಿಯಂತ್ರಣ l ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ವಿಡಿಯೋ ಸಂವಾದ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೂ ಕಡ್ಡಾಯವಾಗಿ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ  ಡಾ.ಎಸ್.ಬಿ. ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ(ಮಾ.24) ಜಿಲ್ಲೆಯ ಎಲ್ಲ ತಾಲೂಕುಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದೇ ರೀತಿ ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ ಎಂಬ ದೂರುಗಳಿದ್ದು, ಇಂದು ಸಂಜೆಯೊಳಗೆ ಕ್ವಾರಂಟೈನ್ ಇರುವರಿಗೆ ಕಡ್ಡಾಯವಾಗಿ ಸ್ಟ್ತಾಂಪಿಂಗ್ ಮಾಡಬೇಕು.

ಕುಟುಂಬದ ಸದಸ್ಯರಿಗೂ ಸ್ಟ್ಯಾಂಪಿಂಗ್ ಕಡ್ಡಾಯ

ಕೋವಿಡ್-19 ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಯ ಕುಟುಂಬದ ಎಲ್ಲ ಸದಸ್ಯರಿಗೂ ಕೂಡ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಆ ಪ್ರಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ವಾರಂಟೈನ್ ಇರುವ ವ್ಯಕ್ತಿಗಳ ಮನೆಯ ಮೇಲೆ‌ ನಿಗದಿತ ಮಾದರಿಯ ಎಚ್ಚರಿಕೆಯ ಪತ್ರವನ್ನು ಕೂಡ ಅವರ ಮನೆಯ‌ ಮೇಲೆ ಅಂಟಿಸಬೇಕು. ಆ ವ್ಯಕ್ತಿಯ ಮನೆಗೆ‌ ಪೊಲೀಸ್ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ಅಕ್ಕಪಕ್ಕದ ಮನೆಯವರ ದೂರವಾಣಿ ಸಂಖ್ಯೆ ಪಡೆದುಕೊಂಡು ನಿಗಾ ವಹಿಸಬೇಕು.ತಾಲೂಕು, ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಈ ರೀತಿಯ ಕಾರ್ಯವಿಧಾನ ಪಾಲಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ರಚಿಸಿರುವ ತಂಡಗಳು ಕ್ವಾರಂಟೈನ್ ವ್ಯಕ್ತಿ ಮತ್ತು ಕುಟುಂಬಗಳ ಸದಸ್ಯರ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು.

ಸಾಮೂಹಿಕ ಕ್ವಾರಂಟೈನ್ ಕಟ್ಟಡ ಗುರುತಿಸಿ

ಕ್ವಾರಂಟೈನ್ ವ್ಯಕ್ತಿಗಳನ್ನು ಗ್ರಾಮ, ಅಪಾರ್ಟಮೆಂಟ್ ಮತ್ತಿತರ ಕಡೆಗಳಲ್ಲಿ ‌ಇರಿಸಿಕೊಳ್ಳಲು ಜನರು ವಿರೋಧ ವ್ಯಕ್ತಪಡಿಸಿದರೆ ಅಂತಹ ವ್ಯಕ್ತಿಗಳ ಸಾಮೂಹಿಕ ಕ್ವಾರಂಟೈನ್ಗಾಗಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ನಿರ್ದೇಶನ ನೀಡಿದರು.

ಇದರ ಜತೆಗೆ ಸಾಮೂಹಿಕ ಕ್ವಾರಂಟೈನ್ಗೆ ಅನುಕೂಲ ವಾಗುವಂತೆ  ಸರ್ಕಾರದ ಕಟ್ಟಡಗಳು, ಖಾಸಗಿ ಕಟ್ಟ ಮತ್ತು ಹೋಟೆಲ್ ಅಥವಾ ವಸತಿಗೃಹಗಳನ್ನು ಕೂಡ ಗುರುತಿಸಲು ತಿಳಿಸಿದರು.ರಜೆ ಇದ್ದಾಗ್ಯೂ ಯಾವುದೇ ಸಿಬ್ಬಂದಿ ಕೇಂದ್ರ ಸ್ಥಾನ‌ ತೊರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

144 ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿಎಸ್ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಲಾಕ್ ಡೌನ್ ಹಾಗೂ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಆದೇಶವನ್ನು ಚಾಚೂತಪ್ಪದೇ ಪಾಲಿಸಬೇಕು. 144 ಕಲಂ ಉಲ್ಲಂಘಿಸುವ ಜನರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ‌ ನೀಡಿದರು.

ಅತ್ಯಾವಶ್ಯಕ ಸೇವೆಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಬೇಕು. ಮೆಡಿಕಲ್, ದಿನಸಿ ಅಂಗಡಿ, ಅಂಚೆ ಇಲಾಖೆ, ಮಾಧ್ಯಮ ಪ್ರತಿನಿಧಿ ಸೇರಿದಂತೆ ತುರ್ತು ಸೇವೆ ಸಲ್ಲಿಸಲು ಅಗತ್ಯವಿರುವ ಜನರಿಗೆ‌ ಮಾತ್ರ ಅವಕಾಶ ಕಲ್ಪಿಸಲು ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಸಾಮೂಹಿಕ ಪ್ರಾರ್ಥನೆ, ಉತ್ಸವಗಳಿಗೆ ನಿರ್ಬಂಧ

ಎಲ್ಲ‌ ಜಾತಿ- ಧರ್ಮಗಳ‌ ಧಾರ್ಮಿಕ ಉತ್ಸವ, ಆಚರಣೆ ಮತ್ತು ಸಾಮೂಹಿಕ ಪ್ರಾರ್ಥನೆ ಸೇರಿದಂತೆ ‌ಜನಸಮೂಹ ಸೇರುವ ಎಲ್ಲ ಆಚರಣೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೂಚನೆ ನೀಡಿದರು.

ಕರ್ತವ್ಯ ನಿರತ‌ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅನುಷ್ಠಾನ ಸುಲಭವಾಗುತ್ತದೆ. ಆದ್ದರಿಂದ ಎಲ್ಲರೂ ಇದನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಗ್ರಾಮ ಮಟ್ಟದಲ್ಲಿ ಟಾಸ್ಕಫೋರ್ಸ್ ತಂಡಗಳನ್ನು ತಕ್ಷಣ ರಚಿಸಿಕೊಂಡರೆ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು ಸಾಧ್ಯವಾಗಲಿದೆ ಎಂದರು.

ಸ್ಥಳೀಯವಾಗಿ ಲಭ್ಯವಿರುವ ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಮಾಡಿಸಬೇಕು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಎಂ.ಕೊಡ್ಲಿ, ಪಡಿತರ ವಸ್ತು, ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ