ಕೃಷಿ

ಚಿತ್ರದುರ್ಗ ಜಿಲ್ಲೆಯಲ್ಲಿ 63087 ಹೆಕ್ಟೇರ್ ಭೂ ಪ್ರದೇಶದಲ್ಲಿ ತೆಂಗು

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಕಲ್ಪವೃಕ್ಷವೆಂದೆ ಹೆಸರುವಾಸಿಯಾಗಿರುವ ತೆಂಗು, ಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದು. ಇದು ಆಹಾರ, ಒಣಕೊಬ್ಬರಿ, ಪಾನೀಯ ಮತ್ತು ಉರುವಲು ವಸ್ತುಗಳನ್ನು ಒದಗಿಸುವುದಲ್ಲದೆ ಹಲವಾರು ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಒದಗಿಸುತ್ತದೆ.

ಜಿಲ್ಲೆಯಲ್ಲಿ 63087 ಹೆಕ್ಟೇರ್ ಭೂ ಪ್ರದೇಶದಲ್ಲಿ ತೆಂಗುಬೆಳೆ ಬೆಳೆಯಲಾಗಿದೆ. ತಾಲ್ಲೂಕುವಾರು ವಿವರ ಇಂತಿದೆ. ಚಳ್ಳಕೆರೆ-912, ಚಿತ್ರದುರ್ಗ-1085, ಹೊಳಲ್ಕೆರೆ-20008, ಹಿರಿಯೂರು-10709, ಹೊಸದುರ್ಗ-30327 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 45 ಹೆ. ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.

ನೀರು ಬಸಿದು ಹೋಗುವ ಆಳವಾದ ಮರಳು ಮಿಶ್ರಿತ ಗೋಡು ಮಣ್ಣು, ಜಂಬಿಟ್ಟಿಗೆ ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ತೆಂಗು ಬೆಳೆಯಬಹುದು. ಜೇಡಿ ಮಣ್ಣು ಹಾಗೂ ನೀರು ನಿಲ್ಲುವ ಪ್ರದೇಶದಲ್ಲಿ ತೆಂಗು ಹುಲುಸಾಗಿ ಬೆಳೆಯುವುದಿಲ್ಲ. ಜೂನ್‍ನಿಂದ ಜುಲೈ ತಿಂಗಳು ತೆಂಗು ನಾಟಿ ಮಾಡಲು ಸೂಕ್ತ.

ಬೇಸಿಗೆಯಲ್ಲಿ ತೆಂಗು ಆರೈಕೆ

ತೆಂಗು ಬೆಳೆಯಲ್ಲಿ ಎತ್ತರ, ಗಿಡ್ಡ, ಸಂಕರಣ, ಚಂದ್ರಕಲ್ಪ ತಳಿಗಳಿವೆ. ಜಿಲ್ಲೆಯಲ್ಲಿ ಸ್ಥಳೀಯ ತಳಿಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ತೆಂಗು ಉಷ್ಣವಲಯದ ಬೆಳೆಯಾಗಿದ್ದು, ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬಯಸುತ್ತದೆ. ಇದು ಸಸಾರಜನಕ, ಪೊಟ್ಯಾಷಿಯಂ, ಸೋಡಿಯಂ ಸೇರಿದಂತೆ ಇನ್ನಿತರೆ ಖನಿಜಾಂಶಗಳನ್ನು ಒಳಗೊಂಡಿದೆ. ತೆಂಗು ಬೆಳೆ ಉತ್ತಮ ಇಳುವರಿಗೆ ಬೇಸಿಗೆ ಕಾಲದಲ್ಲಿ ನೀರಾವರಿ ಅಗತ್ಯಗತ್ಯವಾಗಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಕೆ ಸೂಕ್ತವಾಗಿದೆ.

ತೆಂಗು ಸಸ್ಯ ಸಂರಕ್ಷಣೆ

ತೇವಾಂಶ ಹಾಗೂ ಪೋಷಕಾಂಶಗಳ ಕೊರತೆ ಇದ್ದು, ಸರಿಯಾಗಿ ಪರಾಗಸ್ಪರ್ಶವಾಗದೇ ಇದ್ದಾಗ ತೆಂಗಿನ ಹೀಚು ಉದುರುವಿಕೆ ಕಂಡುಬರುತ್ತದೆ. ತೆಂಗು ಸಸ್ಯಕ್ಕೆ ಹಾನಿ ಉಂಟುಮಾಡುವ ಹುಳುಗಳು, ಸುಳಿಕೊರೆಯುವ ರೈನೋಸರಸ್ ದುಂಬಿ, ಗರಿತಿನ್ನುವ ಹುಳು, ಕೆಂಪು ಮೂತಿ ಹುಳು, ಹಿಟ್ಟು ತಿಗಣೆ, ಶಲ್ಕ ಕೀಟ, ಗೆದ್ದಲು, ಗೊಣ್ಣೆಹುಳು, ನುಸಿ ಹುಳುಗಳು ತೆಂಗು ಸಸಿಗೆ ಹೆಚ್ಚು ಹಾನಿ ಉಂಟುಮಾಡುತ್ತವೆ.

ತೆಂಗು ಸಸಿಯಲ್ಲಿ ಕಂಡು ಬರುವ ಕಾಂಡ ಸೋರುವ ರೋಗಕ್ಕೆ ತುತ್ತಾದ ಭಾಗವನ್ನು ಹರಿತವಾದ ಬಾಚಿಯಿಂದ ಕೆತ್ತಿ ಅದನ್ನು ತೊಳೆಯಬೇಕು. ನಂತರ 5 ಮಿ.ಲೀ ಕ್ಯಾಲಿಕ್ಸಿನ್ + 100 ಮಿ.ಲೀ ನೀರು ಬೆರೆಸಿದ ದ್ರಾವಣವನ್ನು ಕೆತ್ತಿದ ಭಾಗಕ್ಕೆ ಸವರಬೇಕು. ಹಾಗೂ ಪ್ರತಿ ಗಿಡಕ್ಕೆ 5 ಕಿ.ಗ್ರಾಂನಂತೆ ಬೇವಿನ ಹಿಂಡಿಯನ್ನು ಮಡಿಗಳಲ್ಲಿ ಸೇರಿಸಬೇಕು. ಈ ಉಪಚಾರವನ್ನು ಏಪ್ರಿಲ್-ಮೇ, ಸೆಪ್ಟಂಬರ್-ಅಕ್ಟೋಬರ್ ಹಾಗೂ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಮಾಡಬೇಕು.

ಕಣ್ಣುಕೊಳೆರೋಗ (ಸುಳಿಕೊಳೆ, ಬಡ್‍ರಾಟ್), ರೋಗ ಪೀಡಿತ ಸುಳಿಯ ಭಾಗವನ್ನು ತೆಗೆದು ಸ್ವಚ್ಛಗೊಳಿಸಿ ಆ ಪ್ರದೇಶಕ್ಕೆ ಮೆಟಲಾಕ್ಸಿಲ್+ ಮ್ಯಾಕೋಜಬ್ ಎರಡು ಗ್ರಾಂ ಫೇಸ್ಟ್ ಲೇಪಿಸಿ ಮಳೆ ನೀರು ಬೀಳದಂತೆ ರಕ್ಷಿಸಬೇಕು.

ತೆಂಗು ಸಂಸ್ಕರಣೆ

ಚೆನ್ನಾಗಿ ಬಲಿತ ತೆಂಗಿನ ಕಾಯಿಗಳನ್ನು ಹವೆಯಾಡದ ಎತ್ತರದ ಜಾಗದಲ್ಲಿ 8 ರಿಂದ 12 ತಿಂಗಳ ಕಾಲ ಶೇಖರಿಸಿಡಬೇಕು. ತೊಟ್ಟು ಮೇಲ್ಮುಖ ಮಾಡಿ ಶೇಖರಿಸುವುದು ಅಪೇಕ್ಷಣೀಯ. ಈ ಅವಧಿಯಲ್ಲಿ ಕಾಯಿಯ ಒಳಗಿರುವ ನೀರು ಇಂಗಿ ತಿರುಳು ಒಣಗುತ್ತದೆ. ಹೀಗೆ ಒಣಗಿದ ಕಾಯಿಯನ್ನು ಅಲುಗಾಡಿಸಿದರೆ ಒಳಗಿನ ಕೊಬ್ಬರಿಯ ಸದ್ದು ಕೇಳಿಸುತ್ತದೆ. ಅನಂತರ ಸಿಪ್ಪೆಯನ್ನು ಸುಲಿದು ಕವಚ ಒಡೆದು ಕೊಬ್ಬರಿ ಪಡೆಯಬಹುದು. ತಾಜಾ ಕೊಬ್ಬರಿ ಶೇ 4 ರಷ್ಟು ಸಾಸರಜನಕ, ಶೇ 33 ರಷ್ಟು ಕೊಬ್ಬು, ಶೇ 4 ರಷ್ಟು ಖನಿಜಾಂಶ ಮತ್ತು ಶೇ 10 ರಷ್ಟು ಶರ್ಕರ ಪಿಷ್ಟ ಹೊಂದಿರುತ್ತದೆ.

ತೆಂಗು ಬೆಳೆಗೆ ಸಂಬಂಧಿಸಿದಂತೆ ಇತರೆ ಯಾವುದೇ ಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply