NEWSಆರೋಗ್ಯ

ಜಾರ್ಖಂಡ್ ಮೂಲದ ನೆಲೆ ಇಲ್ಲದ ಗರ್ಭಿಣಿಗೆ “ರಾಜ್ಯಾ”ಶ್ರಯ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಉದ್ಯೋಗ ಅರಸಿ ಕರ್ನಾಟಕಕ್ಕೆ ವಲಸೆ ಬಂದು ಅಚಾನಕ್ ಘೋಷಣೆಯಾದ ಲಾಕ್ ಡೌನ್‍ನ ಪರಿಣಾಮ ಅಕ್ಷರಷಃ ರಸ್ತೆಗೆ ಬಿದ್ದಿದ್ದ ಜಾರ್ಖಂಡ್ ಮೂಲದ ಕಟ್ಟಡ ಕಾರ್ಮಿಕ ದಂಪತಿಗೆ, ಅದರಲ್ಲೂ ನೆಲೆ ಇಲ್ಲದೆ ರಸ್ತೆಯಲ್ಲೇ ವಾಸವಿದ್ದ ತುಂಬು ಗರ್ಭಿಣಿ ಮಹಿಳೆಗೆ, ಕರ್ನಾಟಕ ಸರ್ಕಾರ ರಾಜ್ಯಾಶ್ರಯ ಕಲ್ಪಿಸಿದ ಹೃದಯ ಸ್ಪರ್ಶಿ ಘಟನೆ ಇಲ್ಲಿ ಇಂದು ನಡೆದಿದೆ.

ವಾಸ್ತವ ಚಿತ್ರಣ ! ದೂರದ ಜಾರ್ಖಂಡ್ ರಾಜ್ಯದ ಮಿಯಾಬಾದ್ ನಗರದ ಕುಸುಮಾ ದೇವಿ ಇದೀಗ ಏಳು ತಿಂಗಳ  ಗರ್ಭಿಣಿ. ಉದ್ಯೋಗ ದೊರಕಿಸಿಕೊಡುವುದಾಗಿ ತಮ್ಮ ಸೋದರ ಸಂಬಂಧಿ ನೀಡಿದ ಭರವಸೆಯ ಮೇರೆಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ತಮ್ಮ ಪತಿಯ ಜೊತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕಟ್ಟಡ ಕಾರ್ಮಿಕರಾಗಿ ದುಡಿದು ತಮ್ಮ ಅನ್ನವನ್ನು ಸಂಪಾದಿಸಿಕೊಳ್ಳುತ್ತಿದ್ದರು.  ತಾವು ಕೆಲಸ ಮಾಡುವ ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು.

ಇದೇ ವೇಳೆ ಮಾರ್ಚ್ 22 ರ ಜನತಾ ಕಫ್ರ್ಯೂ ಹಾಗೂ ಮಾರ್ಚ್ 24 ರಂದು ಘೋಷಣೆಯಾದ  ಮೊದಲ ಹಂತದ ಲಾಕ್ ಡೌನ್ ಈ ದಂಪತಿಯ ಬಾಳಲ್ಲಿ ಬರ ಸಿಡಿಲು ಬಂದೆರಗಿದಂತಾಗಿದೆ. ಒಂದೆಡೆ ಉದ್ಯೋಗವಿಲ್ಲ. ಮತ್ತೊಂದೆಡೆ ಆದಾಯವಿಲ್ಲ. ಮಗದೊಂದೆಡೆ ಸೂರು ಇಲ್ಲ. ಮೊದಲ ಕೆಲವು ದಿನ ತಮ್ಮ ಸಂಬಂಧಿಯ ಮನೆಯಲ್ಲಿ ಆಶ್ರಯ ಪಡೆದ ಈ ದಂಪತಿಗೆ ” ನಮಗೂ ಕಷ್ಟವಿದೆ. ತಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ” ಎಂದು ಹೇಳಿದಾಗ ದಿಕ್ಕು-ತೋಚದಂತಾಗಿದೆ.

ಇವರ ಕಷ್ಟವನ್ನು ಕಂಡ ನೆರೆ ಮನೆಯ ಸಹೃದಯಿಯೊಬ್ಬರು ಲಾಕ್ ಡೌನ್ ಮುಕ್ತಾಯಗೊಳ್ಳುವವರೆಗೂ ತಮ್ಮ ಮನೆಯಲ್ಲೇ ಇರಲು ಅವಕಾಶ ಕಲ್ಪಿಸಿದ್ದಾರೆ. ಆದರೆ, ಲಾಕ್ ಡೌನ್ ಏಪ್ರಿಲ್ 15 ರಿಂದ ಮೇ 3 ರ ವರೆಗೆ ಮತ್ತೆ ಮುಂದುವರಿರೆಯುತ್ತದೆ ಎಂಬ ಸುದ್ದಿ ಹೊರಹೊಮ್ಮುತ್ತಿದ್ದಂತೆಯೇ, ಅವರೂ ಕೂಡಾ ” ತಾವು ದಯಮಾಡಿ ಜಾಗ ಖಾಲಿ ಮಾಡಿ ” ಎಂದು ಹೇಳಿದ್ದಾರೆ.

ಮನೆ ಇಲ್ಲದೆ, ತಿನ್ನಲು ಅನ್ನವಿಲ್ಲದೆ ರಸ್ತೆಯಲ್ಲಿಯೇ ಮಲಗಿದ್ದ ಈ ದಂಪತಿಯನ್ನು ಕಂಡ ಹಾದಿಹೋಕರೋರ್ವರು ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ( ಹಂಗರ್ ಹೆಲ್ಪ ಲೈನ್ ) ಶುಲ್ಕ-ರಹಿತ ದೂರವಾಣಿ ಸಂಖ್ಯೆ : 155214 ಮೂಲಕ ಸಂಪರ್ಕಿಸಿ ಕರೆ ಮಾಡಿ ಲಾಕ್ ಡೌನ್ ಅವಧಿಯಲ್ಲಿ ಸೂರು ಇಲ್ಲದೆ, ಊಟವಿಲ್ಲದೆ ಈ ಗಂಡ-ಹೆಂಡತಿ ಎದುರಿಸುತ್ತಿರುವ ಸಮಸ್ಯೆಯನ್ನು ತಿಳಿಸಿದ್ದಾರೆ. ಅಲ್ಲದೆ, ಇದೇ ವಿಷಯವನ್ನು ಟ್ವೀಟ್ ಮೂಲಕವೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಈ ವಿಷಯದತ್ತ ವಿಶೇಷ ಗಮನಹರಿಸಿದ ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟ್ವೀಟ್ ತಂಡ ಸ್ವಯಂಸೇವಕರ ನೆರವು ಪಡೆದು ಅವರನ್ನು ಸಂಪರ್ಕಿಸಲು ಯತ್ನಿಸಿದೆ. ತಮ್ಮ ಮೊಬೈಲ್ ದೂರವಾಣಿಗೆ ಮೇಲಿಂದ ಮೇಲೆ ಕರೆಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಭಯ-ಭೀತರಾದ ತಮ್ಮ ಮೋಬೈಲನ್ನು ಸ್ವಿಚ್ ಆಫ್ ಮಾಡಿ ಅತ್ತಿಬೆಲೆ ವ್ಯಾಪ್ತಿಯ ಹಳೆಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ.

ಆದರೆ, ಬೆಂಬಿಡದ ಸ್ವಯಂ ಸೇವಕರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಾತ್ರಿ ಇಡೀ  ದಂಪತಿಗಾಗಿ ಶೋಧ ನಡೆಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಟವರ್ ಮೂಲಕವೂ ಕೂಡಾ ಅವರು ಇರುವ ಸ್ಥಳವನ್ನು ಹುಡುಕುವ ಯತ್ನ ಯಶ ಕಂಡಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಏಳು ಗಂಟೆಗೆ ಕುಸುಮಾ ಅವರ ಪತಿ ತಮ್ಮ ಮೊಬೈಲ್ ಸ್ವಿಚ್ ಆನ್ ಮಾಡಿದ್ದಾರೆ.

ಈ ವಿಷಯವನ್ನು ಅರಿತ ಸ್ಥಳೀಯ ಪೊಲೀಸರು ದಂಪತಿ ಇರುವ ಸ್ಥಳವನ್ನು ಮೊಬೈಲ್ ಟವರ್ ಮೂಲಕ ಪತ್ತೆ ಹಚ್ಚಿದ್ದಾರೆ. ನಂತರ, ಸ್ವಯಂ ಸೇವಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧಕ್ಕೆ ಕರೆತಂದಿದ್ದಾರೆ. ಮೊದಲು

ಊಟ ಮಾಡಿಸಿ, ಅವರ ಕಷ್ಟ-ಸಂಕಷ್ಟವನ್ನು ಆಲಿಸಿದ ಎಲ್ಲರ ಕಣ್ಣಾಲೆಗಳು ತುಂಬಿ ಹೋಗಿದ್ದವು. ತದ ನಂತರ, ಕಾರ್ಮಿಕ ರಾಜ್ಯ ವಿಮಾ ಇಲಾಖೆಯ( ಇಎಸ್‍ಐ ) ಆಸ್ಪತ್ರೆಯ ವೈದ್ಯರು ಗರ್ಭಿಣಿ ಮಹಿಳೆಯ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಲಾಕ್ ಡೌನ್ ಮುಕ್ತಾಯಗೊಳ್ಳುವವರೆಗೂ ಈ ಅವಧಿಗೆ ರಾಜ್ಯ ಸರ್ಕಾರದ ಅತಿಥಿ ಗೃಹದಲ್ಲಿ ಭೋಜನ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಗರ್ಭಿಣಿಗೆ ಅವಶ್ಯಕತೆ ಇರುವ ಎಲ್ಲಾ ಔಷಧೋಪಚಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಟ್ಟಾರೆ ಲಾಕ್ ಡೌನ್ ನಿಂದ ಸಂದಿಗ್ಧಕ್ಕೆ ಒಳಗಾಗಿದ್ದ ದಂಪತಿಗೆ ಇದೀಗ ರಾಜ್ಯಾಶ್ರಯ ದೊರೆತು, ದಂಪತಿಯ ಬಾಳಲ್ಲಿ ಆಶಾಕಿರಣ ಮೂಡಿಸಿದೆ.

Leave a Reply