ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ನೈಋುತ್ಯ ಮುಂಗಾರು ಚುರುಕುಗೊಂಡಿದ್ದು ಜೂನ್ ಹದಿನಾಲ್ಕು ಮತ್ತು ಹದಿನೈದರಂದು ಗುಡುಗು ಸಿಡಿಲು ಸಹಿತ ಭಾರಿ ಮಳೆ ಬೀಳುವ ಸಂಭವ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಎರಡೂ ದಿನಗಳು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯಲ್ಲಿ ಗಂಟೆಗೆ 45 ರಿಂದ 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಸೂಚನೆ ನೀಡಿದೆ.
ಜೂನ್ 15ರ ನಂತರ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಲಿದ್ದು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮುಂದಿನ 48 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇಂದು ಅಂಕೋಲಾದಲ್ಲಿ ಗರಿಷ್ಠ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಶನಿವಾರ 20 ಸೆಂಟಿಮೀಟರ್ ಅತಿ ಹೆಚ್ಚು ಮಳೆಯಾಗಿದ್ದು ಕೋಟ, ಕೊಲ್ಲೂರು 9, ಕುಂದಾಪುರ, ಹೊನ್ನಾವರದಲ್ಲಿ ತಲಾ 8, ಗೋಕರ್ಣ, ಸಿದ್ದಾಪುರದಲ್ಲಿ ತಲಾ 6 ಕಾರವಾರ ಮತ್ತು ಕಾರ್ಕಳದಲ್ಲಿ ತಲಾ ನಾಲ್ಕು, ಮೂಡಬಿದಿರೆ ಮಂಗಳೂರು ನಿಪ್ಪಾಣಿ ಹೊಸನಗರದಲ್ಲಿ ತಲಾ ಮೂರು ಸೆಂಟಿಮೀಟರ್ ಮಳೆಯಾಗಿದೆ.
ಜತೆಗೆ ಚಿಕ್ಕೋಡಿ ಹುಂಚದಕಟ್ಟೆ ಹಾಗೂ ಕಮ್ಮರಡಿಯಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದ್ದು ಕೊಪ್ಪಳದಲ್ಲಿ 38.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.
![](https://vijayapatha.in/wp-content/uploads/2024/02/QR-Code-VP-1-1-300x62.png)