NEWSನಮ್ಮಜಿಲ್ಲೆಸಂಸ್ಕೃತಿ

ದಾರ್ಶನಿಕರ ತತ್ವ ಆದರ್ಶ ಸಮಾಜಕ್ಕೆ ದಾರಿ ದೀಪ

ಭಗೀರಥ ಜಯಂತಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಮತ

ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಸರ್ಕಾರದ ವತಿಯಿಂದ ಹಲವು ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಇವರ ತತ್ವ ಆದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಜಯಂತಿಯಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ ಪ್ರಯತ್ನ.  ಇವರು ತಮ್ಮ 60 ಸಾವಿರ ಚಿಕ್ಕಪ್ಪಂದಿರನ್ನು ಬದುಕಿಸಲು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಇಳಿಸಿದರು.  ಇವರ ಪ್ರಯತ್ನವು ಸಮಾಜಕ್ಕೆ ಪ್ರೇರಣೆ ಆಗಬೇಕು.  ಜಯಂತಿಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ.  ಮಹನೀಯರ ಕೊಡುಗೆಗಳು ಎಲ್ಲಾ ಸಮುದಾಯಕ್ಕೂ ಫಲಕಾರಿಯಾಗಿವೆ ಎಂದು ತಿಳಿಸಿದರು.

ಉಪ್ಪಾರ ಸಮುದಾಯದ ಜಿಲ್ಲಾಧ್ಯಕ್ಷರಾದ ಶಿವಶಂಕರ್ ಮಾತನಾಡಿ ಉಪ್ಪಾರ ಜನಾಂಗವು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ.  ಸ್ವಾತಂತ್ರ ಸಂಗ್ರಾಮದ ಉಪ್ಪಿನ ಸತ್ಯಾಗ್ರಹದಲ್ಲಿ ಉಪ್ಪಾರರು ನೇತೃತ್ವ ವಹಿಸಿಕೊಂಡಿದ್ದರು.  ಈ ಜನಾಂಗವು ಕಟ್ಟಡ ನಿರ್ಮಾಣ, ಗಾರೆ ಕೆಲಸ ಮುಂತಾದ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,  ಕೆಲಸ ಇರುವ ಕಡೆಗೆ ವಲಸೆ ಹೋಗುತ್ತಾರೆ.ಇದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂದುಳಿದಿದ್ದಾರೆ ಎಂದರು.

ಮುಖಂಡ ಮಾಲೂರು ವಿಜಿ ಮಾತನಾಡಿ, ಉಪ್ಪಾರ ಜನಾಂಗವು ರಾಜ್ಯದಲ್ಲಿ ಸುಮಾರು 15 ಲಕ್ಷ ಇದೆ. ಆದರೆ ಇವರಲ್ಲಿ ಸಾಕ್ಷರತೆ ಕಡಿಮೆ. ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸರ್ಕಾರವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜನಾಂಗವನ್ನು ಮುಖ್ಯ ವಾಹಿನಿಗೆ ತರಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!