ಬೆಂಗಳೂರು: ರಾಜಕೀಯ ಪಕ್ಷಗಳ ಸ್ಟಿಕ್ಕರ್ ಅಂಟಿಸಿರುವ ಕಾರಣಕ್ಕೆ ವಶಪಡಡಿಸಿಕೊಳ್ಳಲಾದ ಆಟೋಗಳನ್ನು ಪೊಲೀಸರು ಶೀಘ್ರವೇ ಹಿಂದಿರುಗಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಆಟೋ ಚಾಲಕರ ಘಟಕದ ಅಧ್ಯಕ್ಷ ಅಯೂಬ್ ಖಾನ್ ಆಗ್ರಹಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಯೂಬ್ ಖಾನ್, “ರಾಜ್ಯದಲ್ಲಿ ಮಾರ್ಚ್ 29ರಂದು ಚುನಾವಣಾ ನೀತಿ ಸಂಹಿತೆ ಘೋಷಣೆ ಮಾಡಲಾಯಿತು. ರಾಜಕೀಯ ಸ್ಟಿಕ್ಕರ್ ಅಂಟಿಸಿಕೊಂಡಿರುವ ಆಟೋ ಚಾಲಕರ ವಿರುದ್ಧ ಪೊಲೀಸರು ಅಂದಿನಿಂದಲೇ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರತಿ ಆಟೋಗೆ 5,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ದಂಡ ಕಟ್ಟಲು ಸಾಧ್ಯವಾಗದ ಚಾಲಕರ ಆಟೋಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಮೊದಲೇ ಎಚ್ಚರಿಕೆ ನೀಡದೇ ಹೀಗೆ ಏಕಾಏಕಿ ಕ್ರಮ ಕೈಗೊಳ್ಳುವುದು ಅಮಾನವೀಯ. ನೀತಿ ಸಂಹಿತೆ ನೆಪದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಆಟೋ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.
ದಂಡ ಕಟ್ಟಲು ಸಾಧ್ಯವಾಗದ ಚಾಲಕರ 40ಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರವೇ ಈ ಆಟೋಗಳನ್ನು ಬಿಟ್ಟು ಕಳುಹಿಸಬೇಕು. ಇಲ್ಲದಿದ್ದರೆ ಆದಾಯವಿಲ್ಲದೇ ಅವರ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಹಣ ಮಾಡುವುದೇ ಪೊಲೀಸರ ಉದ್ದೇಶವಾಗಿದ್ದರೆ, ನಾವು ಜನರಿಂದ ಹಣ ಸಂಗ್ರಹಿಸಿ ಕೊಡುತ್ತೇವೆ ಎಂದು ಹೇಳಿದರು.
ಇನ್ನು ಜನರ ರಕ್ಷಣೆಗಿರುವ ಪೊಲೀಸರೇ ಈ ರೀತಿ ಹಗಲು ದರೋಡೆಗೆ ಇಳಿದಿರುವುದು ಖಂಡನೀಯ. ಪ್ರಭಾವಿ ವ್ಯಕ್ತಿಗಳು ಗಂಭೀರ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವ ಪೊಲೀಸರು ಜನಸಾಮಾನ್ಯರು ಹಾಗೂ ಆಟೋ ಚಾಲಕರ ಮೇಲೆ ಮಾತ್ರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುತ್ತಿದ್ದಾರೆ. ವಶಪಡಿಸಿಕೊಂಡ ಆಟೋಗಳನ್ನು ಚಾಲಕರಿಗೆ ಹಿಂದಿರುಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅಯೂಬ್ ಖಾನ್ ಎಚ್ಚರಿಕೆ ನೀಡಿದರು.