NEWSಬೆಂಗಳೂರುರಾಜಕೀಯ

ವಿಧಾನಸಭೆ ಚುನಾವಣೆ: ಎಲ್ಲರೂ ತಪ್ಪದೆ ಮತದಾನ ಮಾಡಿ – ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚು ಮಂದಿ ಐಟಿ-ಬಿಟಿ ಸೆಕ್ಟಾರ್‌ಗಳಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ ಶೇಕಡಾವಾರು ಮತದಾನ ಮಾತ್ರ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್‌ ಗಿರಿನಾಥ್ ತಿಳಿಸಿದರು.

ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ-2023ರ ಅಂಗವಾಗಿ ಚುನಾವಣಾ ಆಯೋಗದ ವತಿಯಿಂದ ನಗರದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಓಟ್ ಫೆಸ್ಟ್(ಮತದಾನದ ಹಬ್ಬ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ಸಾರ್ವತ್ರಿಕ ಚುನಾವಣೆಗಳನ್ನು ಗಮನಿಸಿದರೆ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ. ಈ ಸಂಬಂಧ ಎಲ್ಲರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನ ಮಾಡುವುದು ಆದ್ಯ ಕರ್ತವ್ಯವಾಗಿದ್ದು, ಅವರವರ ಹಕ್ಕನ್ನು ತಪ್ಪದೆ ಚಲಾಯಿಸಬೇಕು. ಅದಕ್ಕಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಐಟಿ-ಬಿಟಿ ಸಂಸ್ಥೆಗಳು, ವಿದ್ಯಾರ್ಥಿಗಳು, ಹೋಟೆಲ್ ಸಂಘಟನೆಗಳು, ಆಸ್ಪತ್ರೆಗಳು, ಯುವ ಮತದಾರರು, ಕಾರ್ಖಾನೆಗಳ ಮುಖ್ಯಸ್ಥರ ಜೊತೆ ಮತದಾನ ದಿನ ಎಲ್ಲರೂ ತಪ್ಪದೆ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಮತದಾನ ಯಶಸ್ವಿಗೊಳಿಸಲು ಯುವಸಮೂಹವೇ ವಿಧಾನಸಭಾ ಚುನಾವಣೆಯ ರಾಯಭಾರಿಗಳು. ಈ ಯುವಸಮೂಹವು ತಮ್ಮ ತಮ್ಮ ನೆರೆಹೊರೆಯ ಪ್ರದೇಶದ ಜನರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಈ ಬಾರಿಯ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಮೇ 10ರಂದು ರಾಜ್ಯದ ಜನರು ತಪ್ಪದೇ ತಮ್ಮ ಮತಗಟ್ಟೆ ಭೇಟಿ ನೀಡಿ ಮತದಾನ ಮಾಡಲೇಬೇಕೆಂದು ನಾಗರಿಕರಿಗೆ ಪ್ರೇರಣೆ ನೀಡುವ ಆಶಯದಿಂದ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಮತದಾನದ ಬಗ್ಗೆ ಅರಿವು ಹಾಗೂ ಉತ್ಸಾಹ ಮೂಡಿಸಲು ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಚುನಾವಣೆಯಲ್ಲಿ ಮೊದಲನೇ ಬಾರಿ ಮತದಾನ ಮಾಡುವ ಯುವಕರ ಸಂಖ್ಯೆ 1 ಲಕ್ಷ ಮೀರಿರುವುದು ದಾಖಲಾರ್ಹ ಸಂಗತಿ.

18 ತುಂಬಿರುವ ಯುವಕರು ಮೊದಲನೇ ಬಾರಿಗೆ ಮತದಾನ ಮಾಡಲು ಮುಂದೆ ಬರಬೇಕಿದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ 4000 ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್ ಗಳನ್ನು ಪ್ರಾರಂಭಿಸಲಾಗಿದೆ. ಕಾಲೇಜುಗಳಿಂದ 18 ತುಂಬಿರುವ ಯುವಕರ ಪಟ್ಟಿಯನ್ನು ಪಡೆದು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಮಾತನಾಡಿ, ಬೆಂಗಳೂರು ಜಾಗತಿಕ ನಗರವಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಮತದಾನವನ್ನು ದಾಖಲಿಸುವ ಗುರಿಯನ್ನು ಸಾಧಿಸಬೇಕಿದೆ. ಬೆಂಗಳೂರು ನಗರದ ಮತದಾನದ ಪ್ರಮಾಣ ಕಡಿಮೆಯಿದ್ದು, ಈ ಬಾರಿಯ ಚುನಾವಣೆಯಲ್ಲಿ ಈ ಪ್ರಮಾಣವನ್ನು ಸುಧಾರಿಸಲು ಹಾಗೂ ಯುವಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಇಂದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಯುವಜನರು ತಮ್ಮ ಪ್ರದೇಶದ ನೆರೆಹೊರೆಯವರನ್ನೂ ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಬೇಕೆಂದು ಕೋರಿದರು. ಇಂದು ಹಮ್ಮಿಕೊಳ್ಳಲಾಗಿರುವ ಬೈಕ್ ರ್ಯಾಲಿ, ಯಕ್ಷಗಾನ, ಫ್ಲಾಶ್ ಮಾಬ್ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬಂದು ಮತದಾನ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ವಿವಿಧ ಕಾರ್ಯಕ್ರಮಗಳ ಆಯೋಜನೆ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಅಂಗವಾಗಿ ಮತದಾನ ಸಂದೇಶವನ್ನು ಪ್ರಚಾರ ಮಾಡಲು ಮತ್ತು ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಚರ್ಚ್ ಸ್ಟ್ರೀಟ್ ನಲ್ಲಿ ಬೈಕ್ ರ‍್ಯಾಲಿ, ಬೀದಿನಾಟಕ, ಯಕ್ಷಗಾನ, ಪ್ಲಾಶ್ ಮಾಬ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಇದೇ ವೇಳೆ ಚರ್ಚ್ ಸ್ಟ್ರೀಟ್ ನೆರೆದಿದ್ದ ಯುವಕರಲ್ಲಿ ಮತದಾನ ಬಗ್ಗೆ ಜಾಗೃತಿ , ವೋಟರ್ ಹೆಲ್ಪ್ ಲೈನ್ ಆಪ್ ಬಗ್ಗೆ ಮಾಹಿತಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳುವುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಪ್ರಚುರಪಡಿಸಲಾಯಿತು. ಮತದಾನ ತಪ್ಪದೇ ಕೈಗೊಳ್ಳಲು ಭಾರತ ಚುನಾವಣಾ ಆಯೋಗದ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಯಾದ ರಾಜೇಂದ್ರ ಚೋಳನ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಶ್ರೀ ದಯಾನಂದ, ವಿಶೇಷ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ