ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ವಾಹನ ಸಂಖ್ಯೆ KA 17 F-1400 ರ ವಾಹನಕ್ಕೆ ಇತ್ತೀಚೆಗೆ ಸಾರಿಗೆ ಪ್ರಾಧಿಕಾರದಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಕೊಂಡು ಬಂದಿದ್ದಾರೆ. ಆದರೆ ಈ ಬಸ್ ಹಿಂಬದಿಯ ಗ್ಲಾಸೇ ಇಲ್ಲ.
ಇನ್ನು ಗ್ಲಾಸ್ ಅಳವಡಿಸುವ ಬದಲು ಒಂದು ದೊಡ್ಡ ತಗಡು ಶೀಟ್ ಹೊಡೆದು ಬಣ್ಣ ಹಚ್ಚಿ ಹಿಂಬದಿಯ ನಾಮ ಫಲಕ, ಮಾರ್ಗದ ಬೋರ್ಡ್ ಹಾಕಲು ಸಾಧ್ಯವಿಲ್ಲದಂತೆ ಮಾಡಿದ್ದಾರೆ. ಇದರಿಂದ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಮಾಡಿರುವ ಶಿವಮೊಗ್ಗ ವಿಭಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಇನ್ನು ಈ ರೀತಿ ಇರುವ ಬಸ್‌ಗೆ ಸಾರಿಗೆ ಪ್ರಾಧಿಕಾರದಿಂದ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಹೇಗೆ ಕೊಟ್ಟರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಇತ್ತ ಒಂದು ಬಸ್‌ಗೆ ಒಂದು ಗ್ಲಾಸ್ ಕೂಡ ಅಳವಡಿಸಲಾರದಷ್ಟು ಸಂಸ್ಥೆ ಬರ್ಬಾದ್ ಆಗಿ ಹೋಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಹಿಂಬದಿಯ ಗ್ಲಾಸ್ ಇಲ್ಲದ ಬಸ್‌ಗೆ ಸಾರಿಗೆ ಪ್ರಾಧಿಕಾರದಿಂದ ಫಿಟ್ನೆಸ್ ಸರ್ಟಿಫಿಕೇಟ್ ಹೇಗೆ ಕೊಟ್ಟರು ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೆ ಈ ರೀತಿಯ ಬಸ್‌ಗಳನ್ನು ರಸ್ತೆ ಮೇಲೆ ಇಳಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಎಂಡಿ ಸೂಕ್ತ ಕ್ರಮ ಜರುಗಿಸಬೇಕು. ಈ ಬಸ್‌ಗೆ ಖರ್ಚು ಮಾಡಿರುವ ಹಾಗೂ ಬಿಡಿ ಭಾಗಗಳನ್ನು ಅಳವಡಿಸಿರುವ ಮಾಹಿತಿಯನ್ನು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.