NEWSಕೃಷಿ

ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ

ವರ್ಷದ ಅವಧಿಗೆ ರೈತರಿಂದ ನೇರ ಖರೀದಿ l ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ರಾಜ್ಯದ ರೈತರು ಬೆಳೆದ  ಮೆಕ್ಕೆಜೋಳಕ್ಕೆ ಕ್ವಿಂಟಲ್‍ಗೆ  1,760 ರೂ. ದರ ನಿಗದಿ ಪಡಿಸಿ ಒಂದು ವರ್ಷದ ಅವಧಿಗೆ ನೇರವಾಗಿ ರೈತರಿಂದ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

ಹಿರೇಕೆರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವಂತೆ ರೈತರು ಬಹುದಿನಗಳಿಂದ ಬೇಡಿಕೆ ಸಲ್ಲಿಸಿದ್ದರು. ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ ತಯಾರಿಕೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ಒಂದು ವರ್ಷದ ಅವಧಿಗೆ ರೈತರಿಂದ ನೇರವಾಗಿ ಖರೀದಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭಗೊಂಡಿದೆ. 73 ಲಕ್ಷ ಹೆಕ್ಟೇರ್ ಮುಂಗಾರು ಹಂಗಾಮಿನ ಗುರಿ ಹೊಂದಲಾಗಿದೆ. ಪೂರ್ವ ಮುಂಗಾರಿನಲ್ಲಿ 2.22 ಲಕ್ಷ ಹೆಕ್ಟೇರ್ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ 15719 ಹೆಕ್ಟೇರ್ (ಶೇ.9ರಷ್ಟು) ಬಿತ್ತನೆಯಾಗಿದ್ದು, ಬಿತ್ತನೆಗೆ ಅವಶ್ಯವಿರುವ ಬೀಜ ಮತ್ತು ಗೊಬ್ಬರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪೂರ್ವ ಮುಂಗಾರಿಗೆ 1,41,071 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು ಈಗಾಗಲೇ 15066.5 ಕ್ವಿಂಟಲ್ ದಾಸ್ತಾನು ಮಾಡಿಕೊಳ್ಳಲಾಗಿದೆ. ಬಿಳಿಜೋಳ, ಹೆಸರು ಕಾಳು, ಉದ್ದು, ಅಲಸಂದಿ, ನೆಲಗಡಲೆ, ತೊಗರಿ, ಸೂರ್ಯಕಾಂತಿ ಸೇರಿದಂತೆ 5398 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ಹಂಗಾಮಿಗೆ 22.10 ದಶಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, 5.87 ಲಕ್ಷ ಮೆಟ್ರಿಕ್ ಟನ್ ಎಪ್ರಿಲ್ ಮೇ ತಿಂಗಳಿಗೆ ನೀಡಲಾಗಿದೆ. ಹಾಲಿ ದಾಸ್ತಾನು 7.11 ಮೆಟ್ರಿಕ್ ಟನ್ ಇದ್ದು,  ಈಗಾಗಲೇ 1.07 ಲಕ್ಷ ಮೆಟ್ರಿಕ್ ಟನ್ ಗೊಬ್ಬರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಕಳಪೆ ಬೀಜ: ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾವೇರಿ  ಜಿಲ್ಲೆಯ ಇತರೆಡೆ ಹಾಗೂ ಹುಬ್ಬಳ್ಳಿ-ಧಾರವಾಡ, ಬಳ್ಳಾರಿ  ಸೇರಿದಂತೆ ವಿವಿದೆಡೆ ದಾಳಿ ನಡೆಸಿ ಅಂದಾಜು 10.71 ಕೋಟಿ ರೂ. ಮೌಲ್ಯದ 9894.1 ಕ್ವಿಂಟಲ್  ಕಳಪೆ ಬೀಜ ವಶಪಡಿಸಿಕೊಳ್ಳಲಾಗಿದೆ.  ತಪ್ಪಿತಸ್ಥರ ಮೇಲೆ ಕ್ರಮ ವಹಿಸಲು ಗೃಹ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!