NEWSಆರೋಗ್ಯ

ಮೆಗ್ಗಾನ್ ಆಸ್ಪತ್ರೆ ಸುಧಾರಣೆ ಕುರಿತು ಏ.15ರಂದು ಬೆಂಗಳೂರಿನಲ್ಲಿ ಸಭೆ

ಕೊರೊನಾ ವೈರಸ್ ನಿಯಂತ್ರಣ ಮೀಟಿಂಗ್‌ ವೇಳೆ ಸಚಿವ ಈಶ್ವರಪ್ಪ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ, ಅತ್ಯುತ್ತಮ ಗುಣಮಟ್ಟದ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಪ್ರಿಲ್ 15ರಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ತಜ್ಞರ ಉನ್ನತ ಮಟ್ಟದ ಸಭೆಯಲ್ಲಿ ಬೆಂಗಳೂರಿನಲ್ಲಿ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಮೆಗ್ಗಾನ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.

ಆಡಳಿತಾತ್ಮಕ ಕಾರಣಗಳಿಂದಾಗಿ ಮೆಗ್ಗಾನ್ ವೈದ್ಯಕೀಯ ಕಾಲೇಜಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಇತ್ತೀಚಿಗೆ ನಡೆದ ದುರ್ಘಟನೆ ಹಿನ್ನೆಲೆಯಲ್ಲಿ ಕಾಲೇಜಿನ ನೂತನ ನಿರ್ದೇಶಕರಾಗಿ ಡಾ. ಗುರುಪಾದಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕಾಲೇಜಿನ ನ್ಯೂನತೆಗಳ ಕುರಿತು ಹಿರಿಯ ಖಾಸಗಿ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ತಮ ಸೇವೆಯನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದೇ ವೇಳೆ ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಕೆಎಫ್‍ಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಹ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಕೊರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಿ

ಮೆಗ್ಗಾನ್‍ನಲ್ಲಿ ಪ್ರಸ್ತುತ ಒಟ್ಟು ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಲು ಪರೀಕ್ಷೆಯನ್ನು ಹೆಚ್ಚಿಸಬೇಕು. ಪ್ರತಿದಿನ ಕನಿಷ್ಟ 40 ಪರೀಕ್ಷೆಯನ್ನು ನಡೆಸಬೇಕು ಜಿಲ್ಲಾ ನೋಡಲ್ ಕಾರ್ಯದರ್ಶಿ ಮಣಿವಣ್ಣನ್  ಸೂಚನೆ ನೀಡಿದರು.

ಸರ್ಕಾರದಿಂದ ಪ್ರಶಂಸನಾ ಪತ್ರ

ಇತ್ತೀಚೆಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿದ್ದ ಎಲ್ಲಾ ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ ತಲುಪಿಸಲು ಕಾರಣರಾದ ವೈದ್ಯಾಧಿಕಾರಿಗಳು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ, ಅಂಬುಲೆನ್ಸ್ ಚಾಲಕರು, ಸೆಕ್ಯೂರಿಟಿ ಗಾರ್ಡ್‍ಗಳು ಸೇರಿದಂತೆ ಪ್ರತಿಯೊಬ್ಬರಿಗೂ ಸರ್ಕಾರದಿಂದ ಪ್ರಶಂಸನಾ ಪತ್ರವನ್ನು ನೀಡಲಾಗುವುದು ಎಂದು ಕಾರ್ಯದರ್ಶಿ ತಿಳಿಸಿದರು.

ಬಾಕಿ ವೇತನ ಪಾವತಿಸಿ

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ಮಾತನಾಡಿ, ಮೆಗ್ಗಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಅಧಿಕ ಎಎನ್‍ಎಂ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಲಾಗಿಲ್ಲ. ಅವರಿಗೆ ವೇತನ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಸ್ತಾಪಿಸಿದರು.

ಒಪಿಡಿ ಆರಂಭ

ಸೋಮವಾರದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಒಪಿಡಿ ಸೇವೆಯನ್ನು ಪುನರಾರಂಭಿಸಲಾಗುವುದು. ಜನರಲ್ ಸರ್ಜರಿ ಈಗಾಗಲೇ ಮೆಗ್ಗಾನ್‍ನಲ್ಲಿ ಪುನರಾರಂಭಿಸಲಾಗಿದೆ. 7 ಕಡೆಗಳಲ್ಲಿ ಫೀವರ್ ಕಾರ್ನರ್ ಆರಂಭಿಸಲಾಗಿದ್ದು, ಒಟ್ಟು 11 ಕಡೆಗಳಲ್ಲಿ ಫೀವರ್ ಕ್ಲಿನಿಕ್ ಪ್ರಾರಂಭಿಸಲಿದ್ದೇವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಚ್ಚರಿಕೆ

ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ನೆಗಡಿ, ಗಂಟಲು ನೋವು ಇತ್ಯಾದಿ ರೋಗಗಳಿಗೆ ಚಿಕಿತ್ಸೆ ನೀಡಿರುವುದರ ಬಗ್ಗೆ ಪ್ರತಿದಿನ ಮಾಹಿತಿಯನ್ನು ಒದಗಿಸಲು ಈಗಾಗಲೆ ಎಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಮೂಲಕ ಸೂಚಿಸಲಾಗಿದೆ. ಇದಕ್ಕಾಗಿ ಗೂಗಲ್ ಸ್ಪ್ರೆಡ್‍ಶೀಟ್ ತೆರೆಯಲಾಗಿದ್ದು, ಅದರಲ್ಲಿ ಕಡ್ಡಾಯವಾಗಿ ಮಾಹಿತಿಯನ್ನು ನಮೂದಿಸಬೇಕು. ಒಂದು ವೇಳೆ ನಮೂದಿಸದೆ, ಮುಂದೇನಾದರೂ ಅನಾಹುತ ಉಂಟಾದಲ್ಲಿ, ಅಂತಹ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸದರಿ ಆಸ್ಪತ್ರೆಯ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಪಿಎಚ್‍ಸಿಗಳ ಮೇಲ್ದರ್ಜೆ ಪ್ರಸ್ತಾವನೆ

ಕೆಎಫ್‍ಡಿ ಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕೋಣಂದೂರು, ರಿಪ್ಪನ್‍ಪೇಟೆ ಮತ್ತು ಬಿಆರ್‍ಪಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ