NEWSಕ್ರೀಡೆನಮ್ಮಜಿಲ್ಲೆ

ಮೈಸೂರು ಮೃಗಾಲಯಕ್ಕೆ 73.16 ಲಕ್ಷ ರೂ. ದೇಣಿಗೆ

ಯಶವಂತಪುರದ ದಾನಿಗಳಲ್ಲಿ ಸಂಗ್ರಹಿಸಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಯಶವಂತಪುರ ವಿಧಾನಸಭೆ ಕ್ಷೇತ್ರದ ದಾನಿಗಳಿಂದ ಮೈಸೂರು ಮೃಗಾಲಯಕ್ಕೆ 73.16 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಬಿಸಿ ಮೃಗಾಲಯಗಳಿಗೂ ತಟ್ಟಿದ್ದು, ಯಾರೂ ಸಂಚರಿಸದಿರುವುದರಿಂದ ಪ್ರವಾಸಿಗರ ಆಗಮನ ಶೂನ್ಯಕ್ಕೆ ಇಳಿದಿದೆ. ಈ ಕಾರಣದಿಂದಾಗಿ ಮೃಗಾಲಯದ ಪ್ರಾಣಿಗಳ ನಿತ್ಯದ ಆಹಾರಕ್ಕೆ ಹಾಗೂ ನಿರ್ವಹಣೆಗೆ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ ದೇಣಿಗೆ ನೀಡಲಾಗಿದೆ ಎಂದರು.

ಕಳೆದ ಏಪ್ರಿಲ್ 22 ರಂದು ಮೈಸೂರಿನ ಮೃಗಾಲಯಕ್ಕೆ ಅಧಿಕಾರಗಳ ಜೊತೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಚಾರ ಗಮನಕ್ಕೆ ಬಂದಿತ್ತು. ಪರಿಸ್ಥಿತಿಯನ್ನು ಮನಗಂಡ ತಕ್ಷಣ 1.75 ಲಕ್ಷ ರೂಪಾಯಿಯನ್ನು ವೈಯಕ್ತಿಕವಾಗಿ ನೀಡುವ ಮೂಲಕ 5 ವರ್ಷದ ಚಾಮುಂಡಿ ಎಂಬ ಹೆಣ್ಣಾನೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದರು. ಅಲ್ಲದೆ, ಅಲ್ಲಿರುವ 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂಪಾಯಿಯ ನೆರವನ್ನೂ ನೀಡಿದ್ದರು.

ಇದಲ್ಲದೆ ಮೃಗಾಲಯದಲ್ಲಿ ವಾಸಿಸುವ ಪ್ರಾಣಿಗಳ ಆಹಾರ ಮತ್ತು ನಿರ್ವಹಣೆಗೆ ಮತ ಕ್ಷೇತ್ರವಾದ ಯಶವಂತಪುರ ವಿಧಾನಸಭಾ ಕ್ಷೇತ್ರದ ಸ್ನೇಹಬಳಗಕ್ಕೆ ದೇಣಿಗೆ ನೀಡುವಂತೆ ವೈಯಕ್ತಿಕವಾಗಿ ಮನವಿ ಮಾಡಿಕೊಂಡಿದ್ದೆ. ನಮ್ಮ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ 73.16 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಸೇರಿ ಇತರರು ಇದ್ದರು.

Leave a Reply