ಬೆಳಗಾವಿ: ರಸ್ತೆ ದಾಟುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಸಾರಿಗೆ ಬಸ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪರಮಾನಂದವಾಡಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ನಿವಾಸಿ ಅಶೋಕ ತುಳಸಿಗೇರಿ ಎಂಬುವರ ಮಗು ಶ್ಲೋಕ ಮೃತಪಟ್ಟಿರುವುದು.
ಪರಮಾನಂದವಾಡಿಯಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ ಮಗು ರಸ್ತೆ ದಾಟುವಾಗ ಹರಿದಿದೆ ಎನ್ನಲಾಗಿದೆ. ಆದರೆ, ಎರಡು ವರ್ಷದ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಾಲಕರು ಎಲ್ಲಗೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಆದರೆ, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿದ ಸ್ಥಳೀಯರು ಬಸ್ನ ಗಾಜುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗುವಂತಿತ್ತು. ಇತ್ತ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಕುಡಚಿ ಪೊಲೀಸರು ಪ್ರತಿಭಟನಕಾರರನ್ನು ಸಮಾಧಾನಪಡಿಸಿದರು.
ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನೆ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.