ರಾಜ್ಯದಲ್ಲಿ 88 ಕೊರೊನಾ ಪಾಸಿಟಿವ್ ಪ್ರಕರಣಗಳು
ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಹಿತಿ l ಕೋವಿಡ್-19 ಬಗ್ಗೆ ಇರಲಿ ಎಚ್ಚರ
ಕೋಲಾರ: ರಾಜ್ಯದಲ್ಲಿ ಇದುವರೆಗೆ 88 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಭಾನುವಾರ ಮೈಸೂರಿನಲ್ಲಿ ಐದು ಪಾಸಿಟಿವ್ ಪ್ರಕರಣಗಳು ಕಂಡು ಬಂಧಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ 19 ರ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಇದುವರೆಗೆ 3,170 ಜನರ ಸ್ಯಾಪಲ್ ಅನ್ನು ಪರೀಕ್ಷೆ ಮಾಡಿದ್ದು ಇವರಲ್ಲಿ 88 ಜನರಿಗೆ ಪಾಸಿಟಿವ್ ಕಂಡುಬಂದಿದ್ದು ಇವರಲ್ಲಿ 3 ಜನ ಮರಣ ಹೊಂದಿದ್ದಾರೆ. 5 ಜನರು ಗುಣಮುಖರಾಗಿದ್ದಾರೆ. ಪರೀಕ್ಷಿಸಿದವಲ್ಲಿ 2874 ಜನರಿಗೆ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಸಿದ್ದು, ಎಲ್ಲಾ ಪಕ್ಷದವರೂ ಸರ್ಕಾರದ ನಿರ್ದಾರಗಳಿಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ಕೋವಿಡ್-19 ಬೆಡ್‍ಗಳು, ಐಸೋಲೇಷನ್ ಬೆಡ್‍ಗಳು ಹಾಗೂ ವೆಂಟಿಲೇಟರ್‍ಗಳು ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮುಂದೆ ಹೆಚ್ಚಿನ ವೆಂಟಿಲೇಟರ್‍ಗಳ ಅಗತ್ಯ ಇದ್ದಲ್ಲಿ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಸಾವರ ಗಡಿ ದಾಟಿದ್ದು, 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆ ವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜತೆಗೆ ಅಕ್ಕಪಕ್ಕದವರ ಆರೋಗ್ಯ ಕಾಳಜಿಯನ್ನು ಹೊಂದಬೇಕು ಎಂದು ಮನವಿ ಮಾಡಿದ್ದಾರೆ.