NEWSನಮ್ಮರಾಜ್ಯ

ಲಾಕ್‌ಡೌನ್‌ನಿಂದ ಮೂರಾಬಟ್ಟೆಯಾಯಿತು ಬಡವರ ಬದುಕು

ದಿನಗೂಲಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ 10 ಸಾವಿರ ರೂ. ಜಮೆ ಮಾಡಲು ಕಾಂಗ್ರೆಸ್‌ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ಮಾರ್ಚ್‌ 23ರಿಂದ ಉಂಟಾಗಿರುವ ಲಾಕ್’ಡೌನ್ ಪರಿಣಾಮ ಕೂಲಿ ಕಾರ್ಮಿಕರು, ಕ್ಯಾಬ್ ಚಾಲಕರು ಸೇರಿದಂತೆ ಇನ್ನಿತರೆ ಬಡ ವರ್ಗದವರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು ಅವರ ನೆರವಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಮುಂದಾಗಬೇಕು ಎಂದು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ.

ಇಂಥ ಬಡವರಿಗೆ ಆರ್ಥಿಕ ಬೆಂಬಲ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಧಾವಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ಮುಖಂಡರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಲಾಕ್’ಡೌನ್‌ನಿಂದಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಡವರ ನಿತ್ಯ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಇಂತಹವರ ಬ್ಯಾಂಕ್ ಖಾತೆಗಳಿಗೆ 10 ಸಾವಿರ ರೂ. ಜಮೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಲಾಕ್’ಡೌನ್‌ ಅಂತ್ಯಗೊಳ್ಳವವರೆಗೂ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಬೇಕಿದೆ. ಬಡವರಿಗೆ ಸಹಾಯ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ಪ್ರಧಾನಮಂತ್ರಿ ಯಾಗಲೀ, ಮುಖ್ಯಮಂತ್ರಿಗಳಾಗಲೀ ಈ ಬಗ್ಗೆ ಮಾತನಾಡದೇ ಇರುವುದು ದುರಾದೃಷ್ಟಕರ ಸಂಗತಿ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಘೋಷಣೆ ಮಾಡಿದ್ದ ಆರ್ಥಿಕ ಸಹಾಯ ಇನ್ನೂ ಬಡವರರಿಗೆ ತಲುಪುತ್ತಿಲ್ಲ. ಹೀಗಾಗಿ 1.65 ಕೋಟಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರ ಸರ್ವಪಕ್ಷ ಸಭೆ ಕರೆದು ಈ ಕುರಿತು ಮಾತುಕತೆ ನಡೆಸಲಿ. ಜನರಿಗೆ ಸಹಾಯ ಮಾಡುವ ವಿಚಾರ ಬಂದರೆ ಸರ್ಕಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

Leave a Reply

error: Content is protected !!