NEWSನಮ್ಮಜಿಲ್ಲೆ

ವಲಸೆ ಕಾರ್ಮಿಕರು ಜಿಲ್ಲೆಯೊಳಗೆ ಬಾರದಂತೆ ಎಚ್ಚರವಹಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರವೀಂದ್ರ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ:  ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆ, ವಲಸೆ ಕಾರ್ಮಿಕರು ಬಾರಿ ಸಂಖ್ಯೆಯಲ್ಲಿ ಜಿಲ್ಲೆಯೊಳಗೆ ಬರುತ್ತಿದ್ದು, ಇದನ್ನು ತಡೆಗಟ್ಟಲು, ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗದಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇಂದು ಕೊರೊನಾ ವೈರಾಣು (ಕೋವಿಡ್-19) ಹರಡುವಿಕೆ ತಡೆಗಟ್ಟುವ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಾಕ್ ಡಾನ್ ಹಿನ್ನೆಲೆ ಕೆಲಸ-ಕಾರ್ಯಗಳು ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಆತಂಕದಲ್ಲಿ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದು, ಇದನ್ನು ತಡೆಗಟ್ಟುವುದು ಅವಶ್ಯವಾಗಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ ಪ್ರದೇಶದಲ್ಲಿರುವ ಕಾರ್ಮಿಕರಿಗೆ ಸಮುದಾಯ ಭವನದಲ್ಲಿ ವಾಸ ಹಾಗೂ ಊಟಕ್ಕೆ ವ್ಯವಸ್ಥೆ ಮಾಡಬೇಕು. ಈ ಸಂಬಂಧ ತಾಲ್ಲೂಕುಗಳ ತಹಶೀಲ್ದಾರ್ ಗಳು, ಕಾರ್ಮಿಕ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಹಕಾರ ಪಡೆದು ಯಾವುದೇ ಕಾರ್ಮಿಕರು ಮೂಲಭೂತ ಸೌಕರ್ಯದಿಂದ ವಂಚಿತವಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಅಲ್ಲದೇ ಗ್ರಾಮಾಂತರ ಪ್ರದೇಶದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದ ಸಮಿತಿಗಳ ಮೂಲಕ ಅಕ್ಷರ ದಾಸೋಹ ಕಚೇರಿಗಳಲ್ಲಿ ಕಾರ್ಮಿಕರಿಗೆ ಊಟ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಲಭ್ಯವಿರುವ ಹಣ್ಣು, ತರಕಾರಿ ಹಾಗೂ ದಿನಸಿಗಳ ಬಗ್ಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ರೈತರು ಬೆಳೆದಿರುವ ಹಣ್ಣು ಹಾಗೂ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಅಧಿಕಾರಿಗಳು ಕೃಷಿ ಉತ್ಪನ್ನಗಳ ಮಾರುಕಟ್ಟೆ ಅಧಿಕಾರಿಗಳು ಕ್ರಮವಹಿಸಬೇಕು. ರೈತರು ಬೆಳೆದಿರುವ ಯಾವುದೇ ಪದಾರ್ಥಗಳಿಗೆ ಮಾರುಕಟ್ಟೆ ಇಲ್ಲದಂತೆ ಆಗಬಾರದು ಎಂದು ತಿಳಿಸಿದರು.

‌ ಹಾಲು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಹಾಗೂ‌ ಔಷಧಿಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ನಿರ್ಬಂಧ ಇರಬಾರದು. ಅಗತ್ಯ ಸೇವೆಯಲ್ಲಿರುವ ಸರ್ಕಾರಿ ವಾಹನಗಳು, ನೌಕರರನ್ನು ಹೊರತುಪಡಿಸಿ,‌ ಗುಂಪು-ಗುಂಪಾಗಿ ಜನರನ್ನು ಸಾಗಣೆ ಮಾಡುವ ವಾಹನಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.

‌ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಪ್ರಕಟಿಸುವ ಮೂಲಕ ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿವೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನರು ವದಂತಿಗಳಿಗೆ ಕಿವಿಗೊಡದೇ ಸರ್ಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಹಕರಿಂದ ಹೆಚ್ಚಿನ ದರ ಪಡೆದಲ್ಲಿ ಹಾಗೂ ಕೃತಕ ಅಭಾವ ಮತ್ತು ಅನಧಿಕೃತವಾಗಿ ದಾಸ್ತಾನು ಕಂಡುಬಂದಲ್ಲಿ ಅಂತವರ ವಿರುದ್ದ ವಸ್ತುಗಳ ಕಾಯ್ದೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ್,  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ, ಉಪ ಪೊಲೀಸ್ ಅಧೀಕ್ಷಕ ರಂಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ