NEWSಆರೋಗ್ಯ

ಸದಾಸ್ಮಿತ ಫೌಂಡೇಷನ್ ನಿಂದ 5 ಲಕ್ಷ ರೂ.ಕಿಟ್ ವಿತರಣೆ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ‘ಸದಾಸ್ಮಿತ ಫೌಂಡೇಷನ್’ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೊತ್ತದ 40 ಪಿಪಿ ಕಿಟ್, 200 ಮಾಸ್ಕ್ ಮತ್ತು 200 ಸ್ಯಾನಿಟೈಸರ್‌ಗಳನ್ನು ಶಾಸಕ ಕೆ.ಜಿ.ಬೋಪಯ್ಯ ಸೋಮವಾರ ಹಸ್ತಾಂತರಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಿಟ್ ವಿತರಿಸಿ ಮಾತನಾಡಿದ ಕೆ.ಜಿ.ಬೋಪಯ್ಯ, ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಇಲಾಖೆ, ಸಾರ್ವಜನಿಕರೂ ಸೇರಿದಂತೆ ಎಲ್ಲರ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ನೋಡಿಕೊಳ್ಳಲಾಗಿದೆ. ಇನ್ನು ಮುಂದೆಯೂ ಸಹ ಲಾಕ್‍ಡೌನ್ ಸಂಬಂಧ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಸದಾನಂದ ಗೌಡ ಅವರ ಆಶಯದಂತೆ ವೈದ್ಯಕೀಯ ಸಿಬ್ಬಂದಿಗೆ 200 ಎನ್.95 ಮಾಸ್ಕ್, 200 ಸ್ಯಾನಿಟೈಸರ್‌ಗಳು ಮತ್ತು 40 ಪಿಪಿ ಕಿಟ್‍ಗಳನ್ನು ವೈದ್ಯಕೀಯ ಸಿಬ್ಬಂದಿ ಸೇವೆಗಾಗಿ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಮೊದಲ ಒಂದು ದೃಢೀಕೃತ ಪ್ರಕರಣ ಹೊರತುಪಡಿಸಿ ಮತ್ತಾವುದೇ ಕೊರೊನ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು.

ಈ ನಿಟ್ಟಿನಲ್ಲಿ ಲಾಕ್‍ಡೌನ್ ಮುಗಿಯುವವರೆಗೂ ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು. ಅವಶ್ಯ ಸಂಧರ್ಭಗಳಲ್ಲಿ  ಅಂತರ ಕಾಯ್ದುಕೊಂಡು ಸರ್ಕಾರದ ಆದೇಶವನ್ನು ಪಾಲಿಸುವಂತೆ ಕೆ.ಜಿ.ಬೋಪಯ್ಯ ಮನವಿ ಮಾಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧೀಕ್ಷಕರಾದ ಡಾ.ಲೋಕೇಶ್, ಡಾ.ಮಂಜುನಾಥ್, ಆಡಳಿತಾಧಿಕಾರಿ ಮೇರಿ ನಾಣಯ್ಯ, ಬಸವರಾಜು, ಸದಾಸ್ಮಿತ ಫೌಂಡೇಷನ್‍ನ ಕಡ್ಲೇರ ಕೀರ್ತನ್, ಡಾ.ರವಿಚಂದ್ರ, ಗಣಿಪ್ರಸಾದ್, ಕೆ.ಎಸ್ ಭೀಮಯ್ಯ ಇತರರು ಇದ್ದರು.

Leave a Reply