![](https://vijayapatha.in/wp-content/uploads/2022/08/19-Aug-Venkatanarayana-150x150.jpg)
ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ ಅವರು ಬಿಜೆಪಿಯ ಪ್ರಲ್ಹಾದ ಜೋಷಿ ಅವರ ಹೇಳಿಕೆ ಒಂದಷ್ಟು ಅರಿವಿನ ಬತ್ತಳಿಕೆಯನ್ನು, ಕಾಲದ ಹಿಂದಿನ ಮರ್ಮವನ್ನು ನೆನಪಿಸುವಂತ ನೆನಪಿ ಮೂಟೆಯನ್ನು ಬಿಚ್ಚಿಟಿದ್ದಾರೆ. ಹೌದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ಸಿನಲ್ಲಿರುವವರೆಲ್ಲಾ ನಕಲಿ ಕಾಂಗ್ರೆಸ್ಸಿಗರು. ಮೂಲ ಕಾಂಗ್ರೆಸ್ಸಿಗರೇ ಇಲ್ಲ ಎಂದೆಲ್ಲಾ ಜೋಷಿ ಹೇಳಿದ್ದರು.
ಮಾನ್ಯ ಪ್ರಲ್ಹಾದ ಜೋಷಿಯವರೇ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ಸಿನಲ್ಲಿರುವವರೆಲ್ಲಾ ನಕಲಿ ಕಾಂಗ್ರೆಸ್ಸಿಗರು. ಮೂಲ ಕಾಂಗ್ರೆಸ್ಸಿಗರೇ ಇಲ್ಲ ಎಂದೆಲ್ಲಾ ಹೇಳಿದ್ದೀರಿ.
ಸಾಮಾನ್ಯವಾಗಿ ಮನುಷ್ಯನಿಗೆ ಅವನ ಬೆನ್ನು ಕಾಣುವುದಿಲ್ಲ. ಹಾಗೆಯೇ ನಿಮಗೂ ಆಗಿರಬೇಕು. ನಿಮಗೂ ಗೊತ್ತಿರಬಹುದು. ಹಿಂದಿನ ಜನಸಂಘದಲ್ಲಿ ರಾಜಕೀಯಕ್ಕೆ ನೇರವಾಗಿ ಬಂದ ಉದಾಹರಣೆ ಬಲು ಅಪರೂಪ. ಆರೆಸ್ಸೆಸ್ ನಲ್ಲಿ ಸಾಕಷ್ಟು ತರಬೇತಿ ಪಡೆದು ರಾಜಕಾರಣಕ್ಕೆ ಅಗತ್ಯವಾದ ಯೋಗ್ಯತೆ ಸಂಪಾದಿಸಿ ಅದು ಸಾಬೀತಾದ ಮೇಲೆಯೇ ಅಂಥವರನ್ನು ಭಾರತೀಯ ಜನಸಂಘಕ್ಕೆ ರಫ್ತು ಮಾಡಲಾಗುತ್ತಿತ್ತು.
ಇಡೀ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಅಂಕಿ ಅಂಶಗಳು ಅವರ ಬೆರಳು ತುದಿಯಲ್ಲಿರುತ್ತಿದ್ದವು. ಪರಿಶುದ್ಧ ಭಾಷೆ, ದೊಡ್ಡ ದನಿಯ ಜನಾಕರ್ಷಕ ಭಾಷಣದ ತರಬೇತಿ ಇರುತ್ತಿತ್ತು. ಹಾಗಾಗಿಯೇ ಜನಸಂಘದ ರಾಜಕೀಯ ಸಭೆಗಳೆಂದರೆ ಸಭಿಕರನ್ನು ಲಾರಿಗಳಲ್ಲಿ ತುಂಬಿ ತರುವ ಅಗತ್ಯವೇ ಇರಲಿಲ್ಲ. ಮುಳ್ಳೂರು ಆನಂದ ರಾವ್ ಜಗನ್ನಾಥ್ ರಾವ್ ಜೋಷಿಯವರ ಸಭೆಗಳೆಂದರೆ ಜನ ದೂರದೂರದಿಂದ ಬರುತ್ತಿದ್ದರು.
ಪ್ರತಿ ಚುನಾವಣೆ ಸಂದರ್ಭದಲ್ಲಿ ವಾಜಪೇಯಿ ಭಾಷಣವೆಂದರೆ ಬೆಂಗಳೂರು ಬಸವನ ಗುಡಿ ನ್ಯಾಷನಲ್ ಕಾಲೇಜು ಮೈದಾನ ತುಂಬಿ ತುಳುಕಿ ಹೋಗುತ್ತಿತ್ತು. ಈಗಿನ ನಿಮ್ಮ ಬಿಜೆಪಿಯಲ್ಲಿ ಈ ಪರಿಸ್ಥಿತಿ ಇದೆಯೇ?
ಆರೆಸ್ಸೆಸ್ ನಲ್ಲಿ ಅಂಥ ತರಬೇತಿಯೂ ಇಲ್ಲ. ಅಲ್ಲಿಂದ ರಾಜಕೀಯ ಘಟಕಕ್ಕೆ ಬರುವವರೂ ಇಲ್ಲ. ಅಧಿಕಾರಕ್ಕಾಗಿ ಶಾಸಕರನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ನಿಮ್ಮ ಪಕ್ಷದಲ್ಲೂ ನಕಲಿಗಳು ಇದ್ದಾರೆ ಎಂಬುದನ್ನು ಮರೆಯಬೇಡಿ.
ಇಂದು ಯಾವ ರಾಜಕೀಯ ಪಕ್ಷವೂ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುವ ಪ್ರಯತ್ನ ಬೇಡ. ನೀವು ಮೂಲ ಆರೆಸ್ಸೆಸ್ಸಿಗ ತುಂಬಾ ಹಿರಿಯ ಮತ್ತು ಗೌರವಾನ್ವಿತ ರಾಜಕಾರಣಿ ಎನಿಸಿಕೊಂಡಿದ್ದೀರಿ. ಆ ಗೌರವ ಹೆಚ್ಚಿಸಿಕೊಳ್ಳಿ ಎಂಬುದಷ್ಟೇ ನಮ್ಮ ಕಳಕಳಿ.
![](https://vijayapatha.in/wp-content/uploads/2024/02/QR-Code-VP-1-1-300x62.png)