ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಪಾರ್ಟಿ ನಾಯಕರಿಗೆ ಕಿರುಕುಳ ನೀಡುತ್ತಿರುವುದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಖಂಡನೆ ವ್ಯಕ್ತಪಡಿಸಿದರು.
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾರವರು ದೆಹಲಿಯಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಜನರಿಗೆ ತಿಳಿದಿದೆ. ಅವರು ಪ್ರಾಮಾಣಿಕವಾಗಿ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸುಪ್ರಸಿದ್ಧತೆಯನ್ನು ಸಹಿಸಹ ಬಿಜೆಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದಾಳಿ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಲಿನ ಸಚಿವರ ಸಾಧನೆ ಕಳಪೆಯಾಗಿದೆ. ಹಾಗೂ ಎಎಪಿ ಆಡಳಿತವಿರುವ ದೆಹಲಿ ಹಾಗೂ ಪಂಜಾಬ್‌ನಲ್ಲಿ ಸಚಿವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯು ತನ್ನ ಸಚಿವರು ಕೆಲಸ ಮಾಡುವಂತೆ ಮಾಡುವುದಕ್ಕಿಂತ, ಎಎಪಿ ಸಚಿವರು ಕೆಲಸ ಮಾಡುವುದನ್ನು ತಡೆಯುವುದರಲ್ಲಿ ನಿರತವಾಗಿದೆ. ಬಿಜೆಪಿಯ ಈ ಕುತಂತ್ರಕ್ಕೆ ಜನರು ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದು ಕರೆ ನೀಡಿದರು.
ಎಲ್ಲೆಲ್ಲಿ ಬಿಜೆಪಿಯ ಆಡಳಿತವಿದೆಯೋ ಅಲ್ಲೆಲ್ಲ ದೊಡ್ಡ ಹಗರಣಗಳು ನಡೆಯುತ್ತಿವೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯನ್ನು ಬಿಜೆಪಿ ಸಚಿವರು ಅಕ್ರಮ ಗಣಿಗಾರಿಕೆಗಾಗಿಯೇ ಮೀಸಲಿಟ್ಟಿದ್ದಾರೆ. ಬಿಜೆಪಿಯು 25 ವರ್ಷಗಳಿಂದ ಆಳುತ್ತಿರುವ ಗುಜರಾತ್‌ನಲ್ಲಿ ಮೂರು ಬೃಹತ್ ಡ್ರಗ್ಸ್ ಜಾಲ ಪತ್ತೆಯಾಗಿದೆ. ಅಲ್ಲಿ ಮದ್ಯಪಾನವನ್ನು ನಿಷೇಧಿಸಿ, ಕಳ್ಳಭಟ್ಟಿಗೆ ಅವಕಾಶ ನೀಡಿ ಜನರು ಸಾಯುವಂತೆ ಬಿಜೆಪಿ ಸರ್ಕಾರ ಮಾಡುತ್ತಿದೆ. ಜನರು ಇದನ್ನೆಲ್ಲ ಗಮನಿಸುವುದಿಲ್ಲ ಎಂಬ ಭ್ರಮೆಯಲ್ಲಿರುವ ಬಿಜೆಪಿಯು ಆಮ್ ಆದ್ಮಿ ಪಾರ್ಟಿಯ ಮೇಲೆ ಕೆಸರು ಎರಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೀಷ್ ಸಿಸೋಡಿಯಾ ಅವರು ದೇಶದಲ್ಲೇ ಅತ್ಯುತ್ತಮ ಶಿಕ್ಷಣ ಸಚಿವರು. ದೆಹಲಿಯ ಸರ್ಕಾರಿ ಶಾಲೆಗಳನ್ನು ಅವರು ಬದಲಿಸಿದ ರೀತಿ ಇಡೀ ದೇಶಕ್ಕೆ ತಿಳಿದಿದೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ಹೊಂದಿರುವ ಬಿಜೆಪಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.
ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಮೂರನೇ ಒಂದರಷ್ಟು ಮಕ್ಕಳು ಮಾತ್ರ 12ನೇ ತರಗತಿವರೆಗಿನ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ದೊಡ್ಡ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಿಜೆಪಿಯು ಮನೀಷ್ ಸಿಸೋಡಿಯಾರವರ ಜನಪ್ರಿಯತೆ ತಗ್ಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ನಡೆಸುವ ಮೂಲಕ ಬಿಜೆಪಿಯು ಮೂರು ಪ್ರಮಾದಗಳನ್ನು ಮಾಡಿದೆ. ನಿಷ್ಪಕ್ಷಪಾತ ತನಿಖೆ ನಡೆಸಲೆಂದು ಇರುವ ಸಿಬಿಐ ಸಂಸ್ಥೆಯ ಘನತೆಗೆ ಧಕ್ಕೆ ತಂದಿದೆ. ಜನರ ಸೇವೆಯಲ್ಲಿ ಪ್ರಾಮಾಣಿಕವಾಗಿ ನಿರತಾಗಿರುವ ಸಚಿವರು ಹಾಗೂ ಅಧಿಕಾರಿಗಳಿಗೆ ಅವಮಾನ ಮಾಡಿದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಿ ಒಳ್ಳೆಯ ಆಡಳಿತವನ್ನು ಕಾಣುತ್ತಿರುವ ಜನತೆಗೆ ಈ ಮೂಲಕ ಅವಮಾನ ಮಾಡಿದೆ ಎಂದರು.
ಸದ್ಯ ಬಿಜೆಪಿಗೆ ಮುಂಬರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗಳಲ್ಲಿ ಎಎಪಿ ವಿರುದ್ಧ ಸೋಲುವ ಭಯ ಕಾಡುತ್ತಿದೆ. ಆದ್ದರಿಂದಲೇ ಆಮ್ ಆದ್ಮಿ ಪಾರ್ಟಿಗೆ ಕಿರುಕುಳ ನೀಡಲು ಆರಂಭಿಸಿದೆ.
ಆಮ್ ಆದ್ಮಿ ಪಾರ್ಟಿಯು ಇದಕ್ಕೆಲ್ಲ ಹೆದರದೇ ಸೂಕ್ತ ರೀತಿಯಲ್ಲಿ ಚುನಾವಣೆಯನ್ನು ಎದುರಿಸಿ ಜಯಗಳಿಸಲಿದೆ. ಬಿಜೆಪಿಯ ದುರಾಡಳಿತದ ಬಂಧನದಿಂದ ಜನರನ್ನು ಮುಕ್ತಗೊಳಿಸುವ ಕೆಲಸವನ್ನು ಆಮ್ ಆದ್ಮಿ ಪಾರ್ಟಿ ಮಾಡಲಿದೆ” ಎಂದು ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)