ದೇಶ-ವಿದೇಶ

ಹೊರದೇಶದಲ್ಲಿರುವ ಜಿಲ್ಲೆ ಜನರ ಮಾಹಿತಿ ‌ನೀಡಿ: ಡಿಸಿ ಡಾ.ಬೊಮ್ಮನಹಳ್ಳಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ನಿವಾಸಿಗಳ ಪೈಕಿ ಯಾರಾದರೂ ಉದ್ಯೋಗ ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದು, ಸದ್ಯದಲ್ಲಿ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅಂತಹವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೂಲತಃ ಇದೇ ಜಿಲ್ಲೆಯವರಾಗಿದ್ದು ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಉದ್ಧೇಶದಿಂದ ಹೊರದೇಶಗಳಲ್ಲಿ ಇರುವರ ಬಗ್ಗೆ ಸಂಬಂಧಿಸಿದ ‌ಕುಟುಂಬದವರು ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಹರಡದಂತೆ ತಡೆಗಟ್ಟುವಿಕೆ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾತ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಸ್ವದೇಶಕ್ಕೆ ಆಗಮಿಸುವವರ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಬೆಳಗಾವಿ ಇವರ ಕಚೇರಿಗೆ ಮಾಹಿತಿಯನ್ನು ಒದಗಿಸಬಹುದು.

ಜಿಲ್ಲಾಧಿಕಾರಿ ಕಚೇರಿಗೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಬೆಳಗಾವಿ ಇವರ ಕಚೇರಿಯಲ್ಲಿ ಸ್ಥಾಪಿಸಿರುವ ಕಂಟ್ರೋಲ್‌ ರೂಮ್ ದೂರವಾಣಿ ಸಂಖ್ಯೆ 0831-2424284 ಗೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!