ನ್ಯೂಡೆಲ್ಲಿ: ವಿಶ್ವ ಹೆಮ್ಮಾರಿ ಕೊರೊನಾ ವಿರುದ್ಧ 21ದಿನಗಳ ವರೆಗೆ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಇದೇ ಭಾನುವಾರ (ಏ.5) ರಾತ್ರಿ 9 ಗಂಟೆಯಿಂದ 9 ನಿಮಿಷಗಳು ಮನೆಯ ವಿದ್ಯುತ್ ಲೈಟ್ ಆರಿಸಿ ಹಣತೆ, ಮೊಂಬತ್ತಿ ಅಥವಾ ಮೊಬೈಲ್ ಟಾರ್ಚ್ ಲೈಟ್ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಭಾರತೀಯನಿಗೂ ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಯಲ್ಲಿ ಮಾಧ್ಯಮಗಳಿಗೆ ಹರಿಯಬಿಟ್ಟ ವಿಡಿಯೋ ಸಂದೇಶದಲ್ಲಿ ದೇಶದ ಸಮಗ್ರ ಜನತೆಯನ್ನು ಕುರಿತು ಮಾತನಾಡಿದ ಮೋದಿ, ಕೊರೊನಾ ಇಡೀ ವಿಶ್ವವನ್ನೇ ಕಾಡುತ್ತಿದ್ದು, ಇದರ ವಿರುದ್ಧ ನಮ್ಮ ದೇಶ ಮಾತ್ರವಲ್ಲ ಪ್ರಪಂಚವೇ ಲಾಕ್‌ಡೌನ್ ಆಗಿದ್ದು, ಪ್ರತಿಯೊಬ್ಬರೂ ಈ ಮಾರಿಯನ್ನು ಹೊಡೆದೋಡಿಸಲು ಪಣತೊಟ್ಟಿದ್ದಾರೆ. ಅದರಲ್ಲಿ ಪ್ರತಿ ಭಾರತೀಯನೂ ಅಭೂತಪೂರ್ವ ಬೆಂಬಲ ಮತ್ತು ಸಹಕಾರ ನೀಡುತ್ತಿರುವುದು ಮಹಾ ಮಾರಿ ವಿರುದ್ಧ ಹೋರಾಟಕ್ಕೆ ಸಿಗುವ ಜಯವಾಗಿದೆ ಎಂದರು.
ಇಂದು ಇರುವ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಮನೆಯಲ್ಲೇ ಇರುವುದರಿಂದ ಒಂದು ರೀತಿಯ ಮಾನಸಿಕ ಖಿನ್ನತೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಅದು ನನಗೂ ಗೊತ್ತು. ಆದರೂ ಈ ಕೊರೊನಾ ಬೀದಿ ಮಾರಿಯನ್ನು ಮನೆಯೊಳಗೆ ಕರೆಯದೆ ಅದು ಬಂದ ದಾರಿಯಲ್ಲೇ ಹೋಗುವಂತೆ, ಜತೆಗೆ ಯಾವುದೇ ಸುಂಕ ಪಡೆಯದೇ ಹಿಂದಿರುಗವಂತೆ ಮಾಡುವ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂಬ ಸಂದೇಶ ನೀಡಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದೀರಿ ಇದು ಕೊರೊನಾ ಪಿಡುಗನ್ನು ತೊಲಗಿಸುವ ಮಾರ್ಗವಾಗಿದೆ. ಅದರಂತೆ ನೀವು ಇಂದು ಮನೆಯಲ್ಲೇ ಇರುವುದರಿಂದ ನಿಮ್ಮಲ್ಲಿ ಕಾಡುತ್ತಿರುವ ಖಿನ್ನತೆಯನ್ನು ಬಡಿದೋಡಿಸಿ ಮನಸ್ಸಿಗೆ ಒಂದಷ್ಟು ಮುದ ನೀಡುವ ದೃಷ್ಟಿಯಿಂದ ಇದೇ ಭಾನುವಾರ ದೇಶವಾಸಿಗಳೆಲ್ಲ ಕೇವಲ 9 ನಿಮಿಷ ನಿಮ್ಮ ಮನೆಯಲ್ಲಿ ಹಣತೆ ಹಚ್ಚಿ ಆ ಮೂಲಕ ದೇಶದ ಪ್ರತಿ ಜನರೊಂದಿಗೆ ಇದ್ದೇವೆ ಎಂಬ ಮನೋಭಾವನೆಯನ್ನು ವೃದ್ಧಿಕೊಳ್ಳಿ ಎಂದು ತಿಳಿಸಿದ್ದಾರೆ.