ಚಿಕ್ಕಮಗಳೂರು: ಕೊರೋನಾ ಸೋಂಕು ತಡೆಗಟ್ಟಲು ಮತ್ತು ನಿಯಂತ್ರಿಸುವ ಉದ್ದೇಶ ಹಾಗೂ ಸಾಮಾಜಿಕ ಸೇವೆಯ ಹಿತದೃಷಿಗಾಗಿ ಸ್ವ-ಇಚ್ಚೆಯಿಂದ ಸ್ವಯಂ ಸೇವಕರು ಪಾಲ್ಗೊಂಡು ಜನತೆಯಲ್ಲಿ ಕೊರೊನಾ ಸೋಂಕು ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಕರೆ ನೀಡಿದ್ದಾರೆ.
ಇಲಾಖೆಯ ಕಚೇಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ ಕೊರೋನಾ ಸೋಂಕಿನ ಬಗ್ಗೆ ಜನ ಜಾಗೃತಿ ಮೂಡಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್‌ನ ಬಗ್ಗೆ ಜನ ಸಾಮಾನ್ಯರಲ್ಲಿ ಅದರ ಬಗ್ಗೆ ಆರೋಗ್ಯ ಶಿಕ್ಷಣವನ್ನು ಪ್ರತಿಯೊಬ್ಬ ಸಾರ್ವಜನಿಕರಿಗೂ ಅರಿವು ಮೂಡಿಸುವುದರೊಂದಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯ ಸಮಸ್ತ ಜನತೆಯು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಆಗುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಪಾಲಿಸುವಂತೆ ನೋಡಿಕೊಳ್ಳಬೇಕು ನಿರ್ಗತಿಕರು, ಅಸಹಾಯಕರು, ಹೊರ ಜಿಲ್ಲೆಯ ಕಾರ್ಮಿಕರುಗಳಿಗೆ ಆಹಾರದ ಕೊರತೆ ಉಂಟಾದಲ್ಲಿ ಕೂಡಲೇ ಪ್ರಾಧಿಕಾರದ ಗಮನಕ್ಕೆ ತರುವುದರೊಂದಿಗೆ ಅವರಿಗೆ ನೆರವಾಗಬೇಕು ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಸ್ಥಳೀಯವಾಗಿ ಬಗೆಹರಿಸಬೇಕು ಹೆಚ್ಚಿನ ಸಮಸ್ಯೆ ಇದ್ದಲ್ಲಿ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ಮಧುವನ ಬಡಾವಣೆಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದ್ದು ಪ್ರಕರಣಗಳು ಹೆಚ್ಚಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಪ್ರತ್ಯೇಕ ಕೊಠಡಿ ವ್ಯವಸ್ಥೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಸ್ವಯಂ ಸೇವಕರುಗಳು ಸೇರಿದಂತೆ ಮತ್ತಿತ್ತರ ಸಂಘ- ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.