ದಾವಣಗೆರೆ: ವರದಿಯಾಗಿದ್ದ 3 ಕೊರೊನಾ ಪ್ರಕರಣಗಳಿಂದ ಆರೆಂಜ್ ಜೋನ್‍ನಲ್ಲಿದ್ದ ದಾವಣಗೆರೆ ಜಿಲ್ಲೆ ಗ್ರೀನ್ ಜೋನ್‍ನತ್ತ ದಾಪುಗಾಲಿಡುತ್ತಿದೆ.
ನಿಯಮದ ಪ್ರಕಾರ ಕೊನೆಯ ಪಾಸಿಟಿವ್ ಪ್ರಕರಣ ವರದಿಯಾದ ನಂತರ 28 ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದಿದ್ದರೆ ಅದನ್ನು ಗ್ರೀನ್ ಜೋನ್ ಗೆ ಸೇರಿಸಲಾಗುತ್ತದೆ. ಅಂದರೆ ಜಿಲ್ಲೆ ಸದ್ಯಕ್ಕೆ ಸೇಫ್.
ಹಾಗಂತ ಮೈಮರೆಯುವಂತಿಲ್ಲ. ಒಮ್ಮೊಮ್ಮೆ ಇದು ಹಿಂದು ಮುಂದಾಗಬಹುದು.ಯಾವುದೇ ಪ್ರಕರಣಗಳು ವರದಿಯಾಗದಿದ್ದರೆ ಹಸಿರು ಜೋನ್‍ನಲ್ಲಿದ್ದ ಜಿಲ್ಲೆಗಳು ಒಟ್ಟಿಗೇ ಅಲರ್ಟ್ ಜೋನ್‍ಗಳಲ್ಲಿ ಬರಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದ ಶ್ರ ವಹಿಸಬೇಕಾಗಿದೆ.
ಆದರೆ ಸದ್ಯಕ್ಕಂತೂ ಜಿಲ್ಲೆಯ ಜನ ನಿಟ್ಟಿಸುರು ಬಿಟ್ಟಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಕಾರ್ಯ ವೈಕರಿಗೆ ಭೇಷ್ ಎಂದು ಬೆನ್ನು ತಟ್ಟುತ್ತಿದ್ದಾರೆ.
ಮಾರ್ಚ್ 23 ರಂದು ಕೊರೊನಾ ಮೊದಲ ಪ್ರಕರಣ ಚಿತ್ರದುರ್ಗ ಜಿಲ್ಲೆಯದ್ದಾಗಿದ್ದರೂ ತಾಂತ್ರಿಕವಾಗಿ ದಾವಣಗೆರೆಗೆ ಸೇರಿತು. ನಂತರ ಮಾರ್ಚ್ 27 ರಂದು ಫ್ರಾನ್ಸ್‍ನಿಂದ ಆಗಮಿಸಿದ ಯುವಕನಲ್ಲಿ ಸೋಂಕು ಕಾಣಿಸಿಕೊಂಡು ಕೇಸ್ ಎರಡಾಯಿತು. ನಂತರ ಅಮೇರಿಕಾದಿಂದ ಆಗಮಿಸಿದ್ದ ಯುವಕನಲ್ಲಿ ಸೋಂಕು ದೃಢಪಟ್ಟು ಆ ಸಂಖ್ಯೆ ಮೂರಕ್ಕೇರಿದ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರಿಗೆ ತಲೆಬಿಸಿ ಜಾಸ್ತಿಯಾಗುವಂತೆ ಮಾಡಿತ್ತು. ತನ್ನಿಂತಾನೇ ಜನರಲ್ಲಿ ಜಾಗೃತಿ ಹೆಚ್ಚಾಗತೊಡಗಿತು.
ಇದೇ ವೇಳೆ ಘೋಷಣೆಯಾದ ಲಾಕ್‍ಡೌನ್ ಬಹಳ ಕಟ್ಟುನಿಟ್ಟಾಗಿ ಜಾರಿಯಾಗುವುದರೊಂದಿಗೆ ಯುದ್ದೋಪಾದಿಯಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸಿ ಸೋಂಕು ಮುಕ್ತವವಾಗುವವರೆಗೆ ಅವಿರತ ಶ್ರಮಿಸಿದ್ದು ಎಲ್ಲೋ ಒಂದು ಕಡೆ ಫಲ ನೀಡಿದೆ.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‍ಪಿ ಹನುಮಂತರಾಯ, ಆರೋಗ್ಯ ಇಲಾಖೆಯ ತಂಡ ವಹಿಸಿದ್ದ ಮುನ್ನೆಚ್ಚರಿಕೆ ಅಷ್ಟಿಷ್ಟಲ್ಲ. ಅದರೊಡನೆ ಎಲ್ಲಾ ಇಲಾಖೆ ಅಧಿಕಾರಿಗಳೂ ನೀಡಿದ ಸಾಥ್ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಿದೆ. ಕೇಂದ್ರ ಆರೋಗ್ಯ ಇಲಾಖೆ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೋಷಣೆ ಮಾಡುವ ಬಗ್ಗೆ ಜಿಲ್ಲೆ ಎದುರು ನೋಡಿತ್ತಿದೆ.