ಬೆಂಗಳೂರು: ಹಸಿರು ಕ್ರಾಂತಿಯ ಹರಿಕಾರ , ಮಾಜಿ ಉಪಪ್ರಧಾನ ಮಂತ್ರಿ ದಿ. ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳು, ವಿಚಾರಧಾರೆಗಳು ಎಂದೆಂದೂ ಮಾದರಿಯಾಗಿದ್ದು, ಅವರ ವಿಚಾರಧಾರೆಗಳನ್ನು ಯುವಪೀಳಿಗೆಯು ಅಧ್ಯಯನ ಮಾಡಿ, ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯುವಕರಿಗೆ ಕರೆ ನೀಡಿದರು.
ಇಂದು ಡಾ. ಬಾಬು ಜಗಜೀವನ ರಾಮ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿ ಸುದ್ದಿಗಾರೊಂದಿಗೆ ಮಾತನಾಡಿದರು.
ಸ್ವಾತಂತ್ರ್ಯಾ ನಂತರ ದೇಶದಲ್ಲಿ ಆಹಾರ ಸಮಸ್ಯೆ ತಲೆದೂರಿ ಜನತೆ ತಲ್ಲಣಗೊಂಡ ಸಂದರ್ಭದಲ್ಲಿ ಸುಧಾರಿತ ಬಿತ್ತನೆ ಬೀಜಗಳ ತಳಿಗಳನ್ನು ಬಳಕೆ ಮಾಡುವ ಮೂಲಕ ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಿ, ಹಸಿರು ಕ್ರಾಂತಿ ಮಾಡಿದರು ಎಂದರು.
ಆಹಾರ ಉತ್ಪಾದನೆಯಲ್ಲಿ ಅಪರಿಮಿತ ಸಾಧನೆಗೈದರು. ಇದರಿಂದ ಜನತೆಯ ಹಸಿವನ್ನು ನೀಗಿಸಲಾಯಿತು. ಡಾ. ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೇ ಹೆಸರುವಾಸಿಯಾದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾಗಿ ಮಾಡಿದ ಸಾಧನೆ ಉಲ್ಲೇಖನೀಯವಾದುದು. ರೈತ ಮತ್ತು ಯೋಧ ಇವರ ಸಲುವಾಗಿ ಅವರು ಶ್ರಮಿಸಿದ ಶ್ರಮ ಅಪರಿಮಿತವಾದುದು. ಕೃಷಿ, ರಕ್ಷಣಾ ವಲಯದಲ್ಲಿ ಅವರ ಮಾರ್ಗದರ್ಶನ, ನಾಯಕತ್ವ ಅವಿಸ್ಮರಣೀಯವಾದುದು ಎಂದರು.
ಅವರು ದೇಶ ಕಂಡ ಅಪರೂಪದ ರಾಷ್ಟ್ರ ನಾಯಕರಾಗಿದ್ದಾರೆ. ಶೋಷಿತರ ಹಕ್ಕಿಗಾಗಿ ನಿರಂತರ ಶ್ರಮವಹಿಸಿ, ಶೋಷಿತರ ಏಳಿಗಾಗಿ ಅಪಾರವಾಗಿ ಶ್ರಮಿಸಿ ಶೋಷಿತರ ಆಶಾಕಿರಣವಾಗಿದ್ದಾರೆ. ಯುವ ಪೀಳಿಗೆಯು ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅನುಸರಿಸಬೇಕು. ಅವರ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ವಸತಿ ಸಚಿವರಾದ ವಿ. ಸೋಮಣ್ಣ ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಂಸದ ನಾರಾಯಣ ಸ್ವಾಮಿ, ಮಾಜಿ ಸಚಿವ ಎಚ್. ಆಂಜನೇಯ, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್, ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.