ಬೆಂಗಳೂರು: ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕನ್ನಡ ಚಲನಚಿತ್ರ ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ದೂರು ದಾಖಲಾಗಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆಗಿದೆ. ಈ ನಿಯಮವನ್ನು ಉಲ್ಲಂಘಿಸಿ, ವಾಹನ ಚಾಲನೆ ಮಾಡಿ, ಅಪಘಾತಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಶರ್ಮಿಳಾ ಮಾಂಡ್ರೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನ ವಸಂತನಗರದ ರೈಲ್ವೇ ಅಂಡರ್ ಪಾಸ್ ನಲ್ಲಿ ಚಲಿಸುತ್ತಿದ್ದಾಗ ಪಿಲ್ಲರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರು ಜಖಂಗೊಂಡಿದೆ.
ಅಪಘಾತಕ್ಕೀಡಾದ ಜಾಗ್ವಾರ್ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಪ್ರಯಾಣ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಅಪಘಾತದಿಂದ ಲೋಕೇಶ್ ಕೈಗೆ ಪೆಟ್ಟಾಗಿದ್ದು, ಶರ್ಮಿಳಾ ಮಾಂಡ್ರೆ ಕತ್ತು ಮತ್ತು ಮುಖಕ್ಕೆ ಪೆಟ್ಟಾಗಿದೆ ಎನ್ನಲಾಗಿದೆ. ಸದ್ಯ ಇವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಂತೆ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.