ಬೆಂಗಳೂರು: ಕೊರೊನಾ ಇಡೀ ವಿಶ್ವವನ್ನೇ ಆವರಿಸಿದ್ದು ಇದು ಮನುಕುಲಕ್ಕೆ ಅಪಾಯ ತಂದೊಡ್ಡಿದೆ. ಹೀಗಾಗಿ ನಾವೆಲ್ಲರೂ ಪಕ್ಷ, ಧರ್ಮದ ವ್ಯತ್ಯಾಸವನ್ನು ಬದಿಗೆ ಸಿರಿಸಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಈ ಮಹಾಮಾರಿಯನ್ನು ತಡೆಯಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಶ್ವಮಾರಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ನಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿ ನಿಭಾಯಿಸಿದ ಎಲ್ಲಾ ಮಾಜಿ ಸಚಿವರು, ವೈದ್ಯ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿದ್ದೇವೆ ಎಂದು ತಿಳಿಸಿದರು.
ಸಮಿತಿಯಲ್ಲಿರುವ ಎಲ್ಲಾ ಸದಸ್ಯರು ಸೇರಿ ಚರ್ಚಿಸಿದ ನಂತರ ಅವರು ವಿವಿಧ ವಿಭಾಗಗಳನ್ನು ಮಾಡಿಕೊಂಡು ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಅದರಂತೆ ನಾವು ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ವಾರ್ ರೂಮ್ ಅನ್ನು ಶಾಸಕ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಆರಂಭಿಸಿದ್ದು, ಅವರು ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾರ್ ರೂಮ್ ರಚನೆ ಮಾಡಿಸಿ. ಜನರ ಸಮಸ್ಯೆ ಹಾಗೂ ಅಹವಾಲು ಸ್ವೀಕರಿಸಿ, ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಅಗತ್ಯವಿರುವ ಜನರಿಗೆ ಸಹಾಯ, ಆಹಾರ ವಿತರಣೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಬೇಕಾಗಿರುವ ಸಾಮಗ್ರಿ ಹಂಚುತ್ತಿದ್ದಾರೆ ಎಂದರು.
ಸರ್ಕಾರೇತ್ತರ ಸಂಸ್ಥೆಗಳು, ಸಂಘಟನೆಗಳು ಏನನ್ನೂ ಅಪೇಕ್ಷಿಸದೇ ಮಾನವೀಯ ಸೇವೆ ನೀಡುತ್ತಿವೆ. ಇವುಗಳ ಜತೆಗೆ ಆರೋಗ್ಯ, ಪೊಲೀಸ್, ಪೌರ ಕಾರ್ಮಿಕರು ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ಸಿಬ್ಬಂದಿ ಶ್ರಮಿಸುತ್ತಿದ್ದು ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನಾವು ಈ ಸಮಯದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ವಿಎಚ್ ಪಿ, ಆರೆಎಸ್‌ಎಸ್‌ಸೇರಿದಂತೆ ಇತರೆ ಸಂಘಟನೆಗಳು ಒಂದೊಂದು ಹೇಳಿಕೆ ನೀಡುತ್ತಿರಬಹುದು. ಮತ್ತೆ ಕೆಲವರು ತಪ್ಪು ಮಾಹಿತಿ ಹರಿಬಿಟ್ಟು ಅಭಿಯಾನ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ದಯವಿಟ್ಟು ಇದನ್ನು ನಿಯಂತ್ರಣ ಮಾಡಿ. ಪಕ್ಷ, ಧರ್ಮ ಎಲ್ಲ ವ್ಯತ್ಯಾಸ ಬಿಟ್ಟು ಮಾನವ ಸೇವೆಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದ್ದು ಆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕಿವಿ ಮಾತು ಹೇಳಿದರು.