ಚಿಕ್ಕಮಗಳೂರು: ಲಾಕ್‌ಡೌನ್ ನಡುವೆಯೂ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಈ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ಇಂದು ನಗರದ ಕೆ.ಎಂ ರಸ್ತೆಯಲ್ಲಿರುವ ಚಿಕ್ಕಮಗಳೂರು ಪಟ್ಟಣ ಸಹಕಾರಿ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 180 ಪೌರಕಾರ್ಮಿಕರಿಗೆ ಉಚಿತ ದಿನಸಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು ಇಂತಹ ಕಷ್ಟದ ಸನ್ನಿವೇಶದಲ್ಲೂ ಪೌರಕಾರ್ಮಿಕರು ತಮ್ಮ ದಿನ ನಿತ್ಯದ ಕೆಲಸವನ್ನು ಆರೋಗ್ಯವನ್ನು ಲೆಕ್ಕಿಸದೆ ಮಾಡುತ್ತಿದ್ದು ಅವರ ಕಾರ್ಯಕ್ಕೆ ಬೆಲೆಕಟ್ಟಲಾಗದು ಎಂದ ಅವರು ಪ್ರತಿಯೊಬ್ಬರಿಗೂ ಲಾಕ್‌ಡೌನ್ ಇದ್ದರೂ ಪೌರಕಾರ್ಮಿಕರು ಮಾತ್ರ ಹಗಲು ರಾತ್ರಿ ಎನ್ನದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ಅಂದವನ್ನು ಹೆಚ್ಚಿಸುವ ಮೂಲಕ ಪ್ರತಿ ಕಡೆಗಳಲ್ಲೂ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದರು.
ಲಾಕ್‌ಡೌನ್ ಸಮಯದಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು ನಿಮ್ಮೊಟ್ಟಿಗೆ ನಾವು ಇದ್ದೇವೆ ಎನ್ನುವ ಮನೋಭಾವನೆಯಿಂದ ಪಟ್ಟಣ ಸಹಕಾರ ಬ್ಯಾಂಕ್ ಇಲ್ಲಿನ ಪೌರ ಕಾರ್ಮಿಕರಿಗೆ ಅಡುಗೆ ಎಣ್ಣೆ, ಬೇಳೆ, ಉಪ್ಪು, ಗೋಧಿ ಹಿಟ್ಟು, ಸಾಂಬಾರ ಪದಾರ್ಥಗಳು ಒಳಗೊಂಡಂತೆ ಒಟ್ಟು 10 ರೀತಿಯ ಆಹಾರ ಪದಾರ್ಥಗಳ ಒಳಗೊಂಡ ಕಿಟ್‌ಗಳನ್ನು ಉಚಿತವಾಗಿ ನೀಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದೆ ಎಂದರು.
ಚಿಕ್ಕಮಗಳೂರು ಪಟ್ಟಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ನಂಜೇಗೌಡ ಮಾತನಾಡಿ ಕೊರೋನಾ ಸೋಂಕು ತಡೆಯಲು ದೇಶಾದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು ಇಂತಹ ತುರ್ತುಪರಿಸ್ಥಿತಿಯಲ್ಲಿ ಬಡ ಕುಟುಂಬಗಳಿಗೆ, ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾನವೀಯತೆ ದೃಷ್ಟಿಯಿಂದ ಬ್ಯಾಂಕ್‌ನ ವತಿಯಿಂದ ಅಳಿಲು ಸೇವೆ ಎಂಬಂತೆ ಉಚಿತವಾಗಿ ಆಹಾರ ಕಿಟ್‌ಗಳನ್ನು ನೀಡುತ್ತಿದ್ದೇವೆ ಎಂದರು.
ಪಟ್ಟಣ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಮಂಜುನಾಥ್ ಜೋಶಿ, ನಿರ್ದೇಶಕರಾದ ಪದ್ಮಾ ತಿಮ್ಮೇಗೌಡ, ಸಿ.ಟಿ.ಮಂಜು, ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.