ಧಾರವಾಡ: ಕೊರೊನಾ ವೈರಾಣು ಅತ್ಯಂತ ಪ್ರಬಲವಾಗಿರುವ ಈ ಸಂದರ್ಭದಲ್ಲಿ ಯಾರು ಮನೆ ಬಿಟ್ಟು, ಹೊರ ಬರದೇ ಸುರಕ್ಷಿತವಾಗಿ ಮನೆಯಲ್ಲಿಯೇ ಇರಬೇಕು ಎಂದು ನಾಡೋಜ ಡಾ.ಚನ್ನವೀರ ಕಣವಿ ಸಂದೇಶ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವನ್ನು ನೀಡಬೇಕು. ಬೀದಿ ಬೀದಿಯಲ್ಲಿ ತಿರುಗುವುದಾಗಲಿ, ಮಾರುಕಟ್ಟೆಗೆ ಹೋಗುವುದಾಗಲಿ, ಗುಂಪಾಗಿ ಸೇರುವುದರಿಂದ ಕೊರೊನಾ ವೈರಾಣು ಸೋಂಕು ತೀವ್ರವಾಗಿ ಹರಡುತ್ತದೆ.ಇದರಿಂದ ಜೀವ ಹಾನಿ ಸಂಭವಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಏ.14ರವರೆಗೆ ಮದ್ಯ ಮಾರಾಟ ನಿಷೇಧ
ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಜಾರಿಯಲ್ಲಿರುವ ಮದ್ಯಪಾನ, ಮದ್ಯ ಮಾರಾಟ ಹಾಗೂ ಮದ್ಯಸಾಗಾಣಿಕೆಯನ್ನು ನಿಷೇಧವನ್ನು ಎಪ್ರೀಲ್ 14ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಆದೇಶ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(2)ರನ್ವಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.