ಬೆಂಗಳೂರು: ನಗರ ಜಿಲ್ಲೆಯ ಆನೇಕಲ್ ತಾಲೂಕು, ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ನಿನ್ನೆ ರಾತ್ರಿ ಹಣ್ಣು ಮತ್ತು ತರಕಾರಿ ಸಾಗಣೆ ಮಾಡುತ್ತಿದ್ದ ವಾಹನ ಚಾಲಕರಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಇಬ್ಬರು ಬ್ರೇಕ್ ಇನ್ಸ್ ಪೆಕ್ಟರ್ ಗಳನ್ನು ಜಿಲ್ಲಾಧಿಕಾರಿ ಜಿ .ಎನ್ . ಶಿವಮೂರ್ತಿ ಅಮಾನತು ಮಾಡಿದ್ದಾರೆ.
ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲಾ ಸಾರ್ವಜನಿಕರನ್ನು ತಪಾಸಣೆ ಮಾಡುವುದು ಹಾಗೂ ಚೆಕ್ ಪೋಸ್ಟ್‍ಗಳಲ್ಲಿ ಜೀವನಾವಶ್ಯಕ ವಸ್ತುಗಳಾದ ಹಾಲು, ಪಡಿತರ ದವಸ ಧಾನ್ಯಗಳು ಹಣ್ಣು ಮತ್ತು ತರಕಾರಿ, ಪೆಟ್ರೋಲ್, ಡೀಸೆಲ್, ಮತ್ತು ಔಷಧಿಗಳನ್ನು ಮಾತ್ರ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ವಾಹನವನ್ನು ತಡೆಗಟ್ಟಿ ವಾಹನ ಚಾಲಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಪೊಲೀಸ್ ಅಧೀಕ್ಷಕರು ಹಾಗೂ ಬೆಂಗಳೂರು ನಗರ ಸಹಾಯಕ ಪೊಲೀಸ್ ಅಧೀಕ್ಷಕರು ಪರಿಶೀಲಿಸಿ ನೌಕರರ ವಿರುದ್ದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬ್ರೇಕ್ ಇನ್ಸ್ ಪೆಕ್ಟರ್‍ಗಳಾದ ಟಿ. ಕೆ ಜಯಣ್ಣ ಹಾಗೂ ಕರಿಯಪ್ಪ ಸೇರಿದಂತೆ ಇವರೊಂದಿಗೆ ಶಾಮೀಲಾಗಿದ್ದ ಮಾಜಿ ಹೋಮ್ ಗಾರ್ಡ್ ವಿವೇಕ್ ಅವರನ್ನು ಚಾಲಕರಿಂದ ಲಂಚ ಪಡೆದ ಹಿನ್ನೆಲೆ ಅಪರ ಪೊಲೀಸ್ ಅಧೀಕ್ಷಕ ಸಜಿತ್ ಅವರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕರಿಯಪ್ಪ ಅವರಿಂದ 1250 ರೂ. ಜಯಣ್ಣ ಅವರಿಂದ 1100 ರೂ. ಹಾಗೂ ವಿವೇಕ್ ಅವರಿಂದ 800 ರೂ. ಹಾಗೂ ಚೆಕ್ ಪೋಸ್ಟ್ ಕಚೇರಿಯಲ್ಲಿ 12350 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.