ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 26 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿಯೇ 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ 6 ಮತ್ತು ಸಂಜೆ ಬುಲೆಟಿನ್ ನಲ್ಲಿ 7 ಸೇರಿ ಒಟ್ಟು 13 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿ 13, ಬೆಳಗಾವಿಯಲ್ಲಿ 9, ಮಂಡ್ಯದಲ್ಲಿ 1, ಮೈಸೂರಿನಲ್ಲಿ 1 ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೊಂಗಸಂದ್ರದ ಬಿಹಾರಿ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. 19 ವರ್ಷದ ಯುವತಿ ಸೇರಿ 37, 21, 17, 28 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಆಂಧ್ರಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ ಚಿಕ್ಕಬಳ್ಳಾಪುರದ 18 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಜತೆಗೆ, ದಕ್ಷಿಣ ಕನ್ನಡದ ಬಂಟ್ವಾಳದ 33 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೆಳಗಾವಿ ಹಿರೇಬಾಗೇವಾಡಿಯ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಓರ್ವ ವ್ಯಕ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನ ನಂಜನಗೂಡಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ 133, ಮೈಸೂರಿನಲ್ಲಿ 89 , ಬೆಳಗಾವಿಯಲ್ಲಿ 54, ವಿಜಯಪುರದಲ್ಲಿ 39, ಕಲಬುರಗಿಯಲ್ಲಿ 36, ಬಾಗಲಕೋಟೆಯಲ್ಲಿ 24, ಚಿಕ್ಕಬಳ್ಳಾಪುರದಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 158 ಜನರು ಗುಣಮುಖರಾಗಿದ್ದು, 18 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿರಿ ಇಂದು ಬೆಂಗಳೂರು, ಬೆಳಗಾವಿಯಲ್ಲಿ ತಲಾ ಆರು ಸೋಂಕಿತರು ಪತ್ತೆ
ರಾಜ್ಯದಲ್ಲಿ ಈ ಹಿಂದೆಂದಿಗಿಂತಲೂ ಇತ್ತೀಚೆಗೆ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಬಹಳ ಎಚ್ಚರಿಕೆಯಿಂದ ಜೀವನ ಸಾಗಿಸಬೇಕಿದೆ. ಕೊರೊನಾವನ್ನು ತೊಲಗಿಸಲು ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು ಅದಕ್ಕೆ ಜನರೂ ಸಾಥ್ ನೀಡಬೇಕಿದೆ.