ಬೆಂಗಳೂರು: ತೆರಿಗೆ ಕಾನೂನುಗಳಲ್ಲಿನ ಕೆಲವು ಉಪಬಂಧಗಳನ್ನು ಸಡಿಲಿಸಲು ಪೂರಕವಾಗುವಂತೆ ಅಧ್ಯಾದೇಶ ಹೊರಡಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು.
ವಿಧಾನ ಸೌಧಧ ಸಮ್ಮೇಳನ ಸಭಾಂಗಣದಲ್ಲಿ ಇಂದು ಎರಡನೇ ಬಾರಿಗೆ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್-19 ಮಹಾಮಾರಿಯ ಸಂಕಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ರಲ್ಲಿ ಕಾಲಮಿತಿ ಅಥವಾ ಸಮಯದ ಅವಧಿಯ ವಿಸ್ತರಣೆ ಹಾಗೂ ಕಾರ್ಯಾನುಷ್ಠಾನದ ಮೇಲೆ ಬೀರುವ ಪ್ರಕರಣಗಳೂ ಒಳಗೊಂಡಂತೆ ಅಧ್ಯಾದೇಶ ಹೊರಡಿಸಲಾಗುವದು ಎಂದರು.
ಕೇಂದ್ರ ಸರ್ಕಾರವು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ಕ್ಕೆ ಕೆಲವು ತಿದ್ದುಪಡಿ ಮಾಡಿ ಈಗಾಗಲೇ ಅಧ್ಯಾದೇಶ ಹೊರಡಿಸಿರುವುದರಿಂದಲೂ, ಸರಕು ಮತ್ತು ಸೇವೆಗಳ ತೆರಿಗೆಯು ಇಡೀ ರಾಷ್ಟ್ರದಲ್ಲೇ ಏಕ ರೂಪ ತೆರಿಗೆ ಪದ್ಧತಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಇಲ್ಲದಿರುವುದರಿಂದ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದು ವಿವರಿಸಿದರು.