ಗದಗ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೊರೊನಾ ಸೈನಿಕರಾದ ವೈದ್ಯರು, ನರ್ಸ್ , ಆಶಾ ಕಾರ್ಯಕರ್ತೆಯರಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯದ 21 ಜಿಲ್ಲೆಗಳಲ್ಲಿನ ಸತತವಾಗಿ ಪ್ರವಾಸ ಮಾಡಿ ಕೊರೊನಾ ನಿಯಂತ್ರಣದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ವೈದ್ಯರು, ಸಂಸದರಿಂದ ಮಾಹಿತಿ ಸಂಗ್ರಹಣೆ ಮಾಡಿ ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ -19 ಚಿಕಿತ್ಸೆಯಲ್ಲಿದ 82 ವರ್ಷದ ವೃದ್ಧೆ ಸಾವನ್ನಪ್ಪಿದ್ದು ಪಿ-166 ಪ್ರಕರಣದ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ 82 ಜನರನ್ನು ಗುರುತಿಸಿ ಪ್ರತ್ಯೇಕ ನಿಗಾದಲ್ಲಿಡಲಾಗಿದೆ ಎಂದರು.
ಪರೀಕ್ಷೆಗೆ ಕಳುಹಿಸಿದ ಎಲ್ಲ ಮಾದರಿಗಳು ನಕಾರಾತ್ಮಕವಾಗಿವೆ. ಮುಂಜಾಗ್ರತಾ ಕ್ರಮವಾಗಿ ಕೋವಿಡ್ -19 ಪತ್ತೆಯಾದ 2 ಪ್ರದೇಶಗಳನ್ನು ಕಂಟೇನ್‌ಮೆಂಟ್ ಏರಿಯಾ ಎಂದು ಘೋಷಿಸಿ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿವಿಧ ಪಿಂಚಣಿ ಯೋಜನೆಗಳ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಮಿತ್ರರ ಮುಖಾಂತರ ಸೇವೆ ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ.82 ರಷ್ಟು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉಪಸ್ಥಿತರಿದ್ದರು.