ಬಳ್ಳಾರಿ: ಸರ್ಕಾರ ನೀಡಿರುವ ಲಿಖಿತ ಭರವಸೆಗಳ ಈಡೇರಿಕೆಗೆ ಹಾಗೂ ನೌಕರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಇದೇ ಅ.10ರಿಂದ ರಾಜ್ಯಾದ್ಯಂತ ಸೈಕಲ್‌ಜಾಥಾ ಹಮ್ಮಿಕೊಂಡಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅ.10ರಂದು ಬೆಳಗ್ಗೆ 10ಗಂಟೆಗೆ ಜಾಥಾ ಆರಂಭವಾಗಲಿದ್ದು, ಮೊದಲ ದಿನ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು. ಬಳಿಕ ಜಾಥಾವು ರಾಜ್ಯಾದ್ಯಂತ ಸಂಚರಿಸಲಿದೆ ಎಂದು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಸುಮಾರು 45ದಿನಗಳವರೆಗೆ ಈ ಬೃಹತ್ ಜಾಥಾ ರಾಜ್ಯಾದ್ಯಂತ ನಡೆಯಲಿದೆ. ಈ ವೇಳೆ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೂ ಭೇಟಿ ನೀಡಿ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಡಿಸಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಇನ್ನು ಬಳ್ಳಾರಿಯಲ್ಲಿ ಆರಂಭಗೊಳ್ಳುವ ಸಾರಿಗೆ ನೌಕರರ ಬೃಹತ್ ಜಾಥಾ ಸುಮಾರು 45 ದಿನಗಳ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ರಾಜ್ಯದ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ನಮ್ಮ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಮತ್ತು ತಾವೇ (ಸರ್ಕಾರವೆ) ನೀಡಿದ ಲಿಖಿತ ಭರವಸೆಗಳ ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ 2021ರ ಏಪ್ರಿಲ್‌ನಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿ ಮುಷ್ಕರ ನಡೆಸಲಾಯಿತು. ಆ ವೇಳೆ ಬಿಎಂಟಿಸಿ ಅಧಿಕಾರಿಗಳು ಮನಸೋ ಇಚ್ಛೆ ನೌಕರರನ್ನು ವಜಾ, ಅಮಾನತು ಮಾಡಿದರು. ಆ ಬಳಿಕ ಅಮಾನತಾದವರನ್ನು ಬೇರೆಬೇರೆ ಘಟಕಗಳಿಗೆ ವರ್ಗಾವಣೆ ಮಾಡುವ, ಅಲ್ಲದೆ ನೌಕರರಿಂದ 4400 ರೂ.ಗಳಿಂದ ಸುಮಾರು 8 ಸಾವಿರ ರೂಪಾಯಿ ವರೆಗೂ ದಂಡದ ಹೆಸರಿನಲ್ಲಿ ವಸೂಲಿ ಮಾಡುವ ಮೂಲಕ ವಾಪಸ್ ಕರ್ತವ್ಯಕ್ಕೆ ನಿಯೋಜನೆ ಮಾಡಿದರು.
ಈ ಬಗ್ಗೆ ನೌಕರರು ನಮ್ಮದೇನು ತಪ್ಪಿಲ್ಲ ನಾವು ಏಕೆ ದಂಡಕಟ್ಟಬೇಕು ಎಂದು ಕೇಳಿದಕ್ಕೆ ಅಂತ ನೌಕರರಿಗೆ ಘಟಕದ ವ್ಯವಸ್ಥಾಪಕರು ಇನ್ನಿಲ್ಲದ ಕಿರುಕುಳ ನೀಡಿದರು. ನ್ಯಾಯ ಕೇಳಿದ ನೌಕರರನ್ನು ಮತ್ತೆ ಅಮಾನತು ಮಾಡಿದರು. ಮಾನಸಿಕ ಹಿಂಸೆ ನೀಡಿದ್ದು ಅಲ್ಲದೆ ಅಲೆಸಿದರು. ಆದರೂ ಆ ಎಲ್ಲವನ್ನು ಸಹಿಸಿಕೊಂಡು ಸಾವಿರಾರು ರೂಪಾಯಿಗಳ ದಂಡವನ್ನು ಕಟ್ಟಿ ಡ್ಯೂಟಿಗೆ ಈಗಲೂ ಕಿರುಕುಳ ಅನುಭವಿಸಿಕೊಂಡೇ ಹೋಗುತ್ತಿದ್ದಾರೆ. ಇಷ್ಟೊಂದು ಹಿಂಸೆ ನೀಡಿದ್ದರೂ ಅದು ಮುಂದೆ ಸರಿಹೋಗುತ್ತದೆ ಎಂದು ಎಲ್ಲ ನೌಕರರು ಭಾವಿಸಿದ್ದರು. ಆದರೆ ಆ ಕಿರುಕುಳಗಳು ಡಿಪೋ ಮಟ್ಟದಲ್ಲಿ ಇನ್ನು ಹೆಚ್ಚಾಗುತ್ತಿವೆ. ಅದಕ್ಕೆ ಮೊದಲು ಕಡಿವಾಣ ಬೀಳಬೇಕು ಎಂದು ನೌಕರರು ಆಗ್ರಹಿಸಿ ಈ ಜಾಥಾ ನಡೆಸುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ನಾಲ್ಕೂ ಸಾರಿಗೆ ನಿಗಮಗಳಿದ್ದು, ಒಂದೊಂದು ನಿಗಮಗಳಲ್ಲಿ ತಮಗೆ ಇಷ್ಟ ಬಂದ ದಿನದಂದು ವೇತನ ಪಾವತಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು. ಕೆಎಸ್‌ಆರ್‌ಟಿಸಿಯಲ್ಲಿ ೀ ತಿಂಗಳಿನಿಂದ ಅಳವಡಿಸಿಕೊಂಡಿರುವಂತೆ ಪ್ರತಿ ತಿಂಗಳ ಒಂದನೇ ತಾರೀಖಿಗೆ ವೇತನ ಪಾವತಿಯಾಗುವಂತೆ ಉಳಿದ ಮೂರು ನಿಗಮಗಳಲ್ಲೂ ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯವನ್ನು ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಬೃಹತ್ ಜಾಥಾ ಆಯೋಸಿದ್ದು, ಸರ್ಕಾರ ಸ್ಪಂದಿಸಬೇಕು, ನಮಗೂ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂಬುದರ ಬಗ್ಗೆ ಸರ್ಕಾರದ ಗಮನ ಸೆಳೆದು ಸರ್ಕಾರ ಆ ನಿಟ್ಟಿನಲ್ಲಿ ನೌಕರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಉದ್ದೇಶ ಈ ಜಾಥಾ ಎಂದು ಹೇಳಿದ್ದಾರೆ.
ಇನ್ನು ಈ ಜಾಥಾದಲ್ಲಿ ಎಲ್ಲ 4ನಿಗಮಗಳ ವಜಾಗೊಂಡ ನೌಕರರು ಮತ್ತು ರಜೆ, ವಾರದ ರಜೆ ಇರುವ ನೌಕರರು ಭಾಗವಹಿಸಬೇಕು. ನಮ್ಮ ಈ ಶಾಂತಿಯುತ ಹೋರಾಟಕ್ಕೆ ಇತರ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.