Please assign a menu to the primary menu location under menu

CrimeNEWSಬೆಂಗಳೂರು

ಬೆಂಗಳೂರಿನಲ್ಲಿ ₹1000 ಕೋಟಿ ಭೂ ಹಗರಣ: ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ ರಾಜ್ಯ ನಾಯಕರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದು ಸಾವಿರ ಕೋಟಿ ರೂಪಾಯಿ ಬೆಲೆಬಾಳುವ 25 ಎಕರೆ ಜುನ್ನಸಂದ್ರ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತಕ್ಕೆ ಸಿಕ್ಕಿದೆ. ಬಿಜೆಪಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಕಂದಾಯ ಸಚಿವ ಆರ್.ಅಶೋಕ್, ಮಹದೇವಪುರ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಈ ಬೃಹತ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಮೋಹನ್ ದಾಸರಿ ಆರೋಪಿಸಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಇಂದು ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಜುನ್ನಸಂದ್ರ ಕೆರೆ ಅಕ್ರಮ ಒತ್ತುವರಿ ಬಗ್ಗೆ ಪೂರಕವಾದ ದಾಖಲೆಗಳನ್ನು ಆಮ್‌ ಆದ್ಮಿ ಪಾರ್ಟಿ ಬಿಡುಗಡೆ ಮಾಡಿ, ಮಾತನಾಡಿದ ಅವರು, ಇಡೀ ಜಗತ್ತಿನಲ್ಲೇ ಭೂಮಾಫಿಯಾದಲ್ಲಿ ಬೆಂಗಳೂರಿನ ರಾಜಕಾರಣಿಗಳು ಮೊದಲ ಸ್ಥಾನ ಪಡೆಯುತ್ತಾರೆ. ಇದು ಹೀಗೆ ಮುಂದುವರಿದರೆ ಸಾಮಾನ್ಯರ ಪಾಡೆನು ಎಂದು ಆತಂಕ ವ್ಯಕ್ತಪಡಿಸಿದರು.

ಆರ್‌ಟಿಸಿ ಸರ್ವೆ ನಂ. 32 ರ ಅಡಿ 24.33 ಎಕರೆ ಸರ್ಕಾರಿ ಕೆರೆ ಅಂಗಳದ ನಕಲಿ ದಾಖಲೆಗಳನ್ನು ಸಲ್ಲಿಸಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. 1930ರಲ್ಲಿ ಜೋಡಿದಾರ ಅಕ್ಕಮ್ಮ ಎಂಬುವವರಿಗೆ ಜುನ್ನಸಂದ್ರ ಕೆರೆಯನ್ನು ನಿರ್ವಹಣೆ ಸಲುವಾಗಿ ಅಂದಿನ ಮೈಸೂರು ಮಹಾರಾಜರು ಒಪ್ಪಂದ ಮಾಡಿಕೊಂಡಿದ್ದರು. ಆದರೆ 1967ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದಾಗ, ಉಳುವವನೇ ಹೊಲದೊಡೆಯ ಎಂಬ ನಿಯಮ ಅನುಷ್ಠಾನಗೊಂಡ ಸಂದರ್ಭ ನಕಲಿ ದಾಖಲೆಗಳನ್ನು ನೀಡಿ ಜುನ್ನಸಂದ್ರ ಕೆರೆ ಭೂಮಿಯನ್ನು ಅಕ್ಕಮ್ಮ ಅವರ ಕುಟುಂಬಸ್ಥರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗುವ, ಸಾರ್ವಜನಿಕ ಆಸ್ತಿಯಾದ ಜುನ್ನಸಂದ್ರ ಕೆರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. 2023 ಡಿಸೆಂಬರ್‌ 21ರಂದು ಹೈಕೋರ್ಟ್‌ ಮಹಾರಾಜರ ಜೊತೆಗಿನ 1930ರ ಒಪ್ಪಂದವನ್ನು ಎತ್ತಿಹಿಡಿದಿದೆ. ಜೋಡಿದಾರ ವಂಶಸ್ಥರಿಗೆ ಭೂಮಿ ಸೇರಬೇಕು ಎಂದು ಆದೇಶ ನೀಡಿದೆ. ಆದರೆ ಕೋರ್ಟ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವ ಸಂದರ್ಭ ಕೆರೆ ಅಂಗಳ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಕೋರ್ಟ್‌ ಆದೇಶದಲ್ಲಿಯೂ ಕೆರೆ ಅಂಗಳ ಅಕ್ಕಮ್ಮ ವಂಶಸ್ಥರಿಗೆ ಸೇರಬೇಕು ಎಂದು ಹೇಳಿಲ್ಲ, ಸುಳ್ಳು ದಾಖಲೆ ನೀಡಿ ನ್ಯಾಯಾಲಯದ ದಿಕ್ಕು ತಪ್ಪಿಸಲಾಗಿದೆ ಎಂದರು.

2014ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, ಆಗಲೇ ಜುನ್ನಸಂದ್ರ ಕೆರೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತ್ತು. 2021ರಲ್ಲಿ ಈ ಕೆರೆ ಉಳಿಸಲು ಆಮ್ ಆದ್ಮಿ ಪಕ್ಷ ಹೋರಾಟಕ್ಕೆ ಮುಂದಾಗಿದ್ದಾಗ, ತಡೆಯುವ ಪ್ರಯತ್ನ ಮಾಡಿದ್ದರು. ಅಂದಿನ ಶಾಸಕರಾಗಿದ್ದ ಅರವಿಂದ ಲಿಂಬಾವಳಿ, ಕಂದಾಯ ಸಚಿವರಾಗಿದ್ದ ಆರ್. ಅಶೋಕ್‌ ಮತ್ತು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಇವರೆಲ್ಲಾ ಸೇರಿ ₹1000 ಕೋಟಿ ಬೆಲೆ ಬಾಳುವ ಜಾಗವನ್ನು ಖಾಸಗಿಯವರಿಗೆ ನೀಡಿ ತಮ್ಮ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಮೋಹನ್ ದಾಸರಿ ಆರೋಪಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರವಿಂದ ಲಿಂಬಾವಳಿ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾನೂನು ಹೋರಾಟದ ಮೂಲಕ ಮತ್ತೆ ಕೆರೆಯನ್ನು ಉಳಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಸರ್ಕಾರಿ ಕೆರೆಯನ್ನು ಉಳಿಸಿ ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಕೆಂಪೇಗೌಡರು ಕಟ್ಟಿದ್ದ ಕೆರೆಗಳನ್ನು ಹೇಗೆ ರಿಯಲ್ ಎಸ್ಟೇಟ್ ಮಾಫಿಯಾಗಳು ಹಾಳು ಮಾಡುತ್ತಿವೆ ಎನ್ನುವುದು ಆತಂಕ ಮೂಡಿಸುತ್ತಿದೆ. ಈ ಹಗರಣದಲ್ಲಿ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ, ಈ ವಿಚಾರದಲ್ಲಿ ಹೋರಾಡುತ್ತಿರುವ ಅಶೋಕ ಮೃತ್ಯುಂಜಯ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ ಮೃತ್ಯುಂಜಯ ಅವರು ಮಾತನಾಡಿ, ಭೂ ಅಕ್ರಮ ಒತ್ತುವರಿ ವಿಚಾರವಾಗಿ ಬಿಎಂಟಿಎಫ್‌ಗೆ ದೂರು ನೀಡಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೆರೆ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ಲೋಹಿತ್ ಜಿ. ಹನುಮಾಪುರ, ಎಎಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ದರ್ಶನ್ ಜೈನ್, ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಹಾಜರಿದ್ದರು.

Leave a Reply

error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...