ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆಯ ಎರಡನೇ ದಿನವಾದ ಇಂದು ಹಾಲರವಿ ಉತ್ಸವ ನಡೆಯಿತು. ಬೇಡಗಂಪಣ ಸಮುದಾಯದ 101 ಅಪ್ರಾಪ್ತ ಹೆಣ್ಣುಮಕ್ಕಳು 9 ಕಿ.ಮೀ. ದೂರದ ಹಾಲರೆಹಳ್ಳದಿಂದ ಬರಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡಿದರು.
ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು, ಹಾಲರೆಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತಂದರು. ಬರಿಗಾಲಲ್ಲಿ ಒಂಬತ್ತು ಕಿ.ಮೀ ಬೆಟ್ಟ, ಗುಡ್ಡ ಹತ್ತಿ ಬಂದ ಇವರನ್ನು ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.
ಬಾಲೆಯರು ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಿದರು. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಯಿತು. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು.
ಇನ್ನೂ ಸೂರ್ಯ ಗ್ರಹಣದ ನಡುವೆಯೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಮೂಲಕ ಮೌಢ್ಯದ ವಿರುದ್ಧ ದೇವಾಲಯದಲ್ಲಿ ಪೂಜೆ ಮಾಡಿದ್ದು ವಿಶೇಷವಾಗಿದ್ದು, ದೇವರ ನಂಬಿಕೆಯನ್ನು ಹೆಚ್ಚಿಸಿದಂತಾಗಿದೆ. ಆದರೆ, ಮೌಢ್ಯಾಚರಣೆ ಸಲ್ಲ ಎಂಬ ಸಂದೇಶ ರವಾನೆಯಾಗಿದೆ.