ಲಖ್ನೋ: ಉಳಿತಾಯ ಖಾತೆಯ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಗೆ ಗೆದ್ದಲು ಹುಳುಗಳು ಮುತ್ತಿಕೊಂಡು ಹಾಳಾಗಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.
ಅಲ್ಕಾ ಪಾಠಕ್ ಎಂಬುವರು 2022 ಅಕ್ಟೋಬರ್‌ನಲ್ಲಿ ಮಗಳ ಮದುವೆಗಾಗಿ ಉಳಿತಾಯ ಖಾತೆಯಲ್ಲಿ ಸಂಗ್ರಹಿಸಿದ್ದ 18 ಲಕ್ಷ ನಗದನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಟ್ಟಿದ್ದರು. ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳು ಲಾಕರ್‌ಅನ್ನು ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ ಪರಿಶೀಲನೆಗಾಗಿ ಅಲ್ಕಾ ಅವರನ್ನು ಬ್ಯಾಂಕ್‍ಗೆ ಕರೆಸಿ ಓಪನ್ ಮಾಡಿದಾಗ 18 ಲಕ್ಷ ರೂ. ನಗದಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದು ಕಂಡಿದೆ.
ಲಾಕರ್ ತೆಗೆಯುತ್ತಿದ್ದಂತೆ ತನ್ನ ನೋಟುಗಳಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದನ್ನು ಕಂಡು ಅಲ್ಕಾ ಪಾಠಕ್ ಆಘಾತಕ್ಕೆ ಒಳಗಾಗಿ ಜ್ಞಾನತಪ್ಪಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ.
ಅಲ್ಕಾ ಪಾಠಕ್ ಅವರು, ಮಕ್ಕಳಿಗೆ ಟ್ಯೂಷನ್ ಮಾಡುವ ಮೂಲಕ ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಅದರಲ್ಲಿ ಒಂದ ಒದಷ್ಟು ಹಣ ಮತ್ತು ಚಿನ್ನದ ಆಭರಣಗಳನ್ನು ಭದ್ರತಾ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟುಕೊಂಡಿದ್ದರು. ಮಗಳ ಮದುವೆಗೆ ಸಾಲ ಮಾಡುವ ಬದಲು ಆಭರಣಗಳ ಖರೀದಿ ಹಾಗೂ ಮದುವೆಯ ಇತರೆ ಖರ್ಚಿಗಾಗಿ 18 ಲಕ್ಷ ಹಣವನ್ನು ಇಟ್ಟಿದ್ದರು.
ಆದರೆ, ಬ್ಯಾಂಕ್ ಅಧಿಕಾರಿಗಳು ಲಾಕರ್ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಗೆದ್ದಲು ಹುಳುಗಳು ನೋಟ್‌ಗಳನ್ನು ತಿಂದುಹಾಕಿವೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದಾಗಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದು, ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈಗ ಆಗಿರುವ ರೀತಿ ಮುಂದೆ ಆಗದಂತೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.
ಇನ್ನು ಹಾಳಾಗಿರುವ ನೋಟ್ಗಳನ್ನು ಆರ್‌ಬಿಐಗೆ ಕಳುಹಿಸಿಕೊಡಲಾಗುವುದು ಎಂದು ಬ್ಯಾಂಕ್ ಅಧಿಕಾರಗಳು ತಿಳಿಸಿದ್ದಾರೆ.