Please assign a menu to the primary menu location under menu

NEWSಕೃಷಿ

ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ

ಕೃಷಿ ಉತ್ಪನ್ನ ಮಾರಾಟ, ಸಾಗಾಣಿಕೆಗೆ ಸಂಪೂರ್ಣ ಅನುಮತಿ l ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಕೃಷಿಗೆ ಪೂರಕವಾದ ಯಂತ್ರಗಳು, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಸಂಪೂರ್ಣ ಅನುಮತಿ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಜ್ಯದಲ್ಲಿ ಕೋವಿಡ್-19 ಆವರಿಸಿರುವ ಕಾರಣ ಕೃಷಿ ಚಟುವಟಿಕೆ ಸುಗಮವಾಗಿ ನಡೆಯಲು ಯಾದಗಿರಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.

ಜಿಲ್ಲೆಯ ರೈತರು ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿಕೊಳ್ಳುತ್ತಾರೆ. ಎಂತಹ ಸಂದಿಗ್ಧ ಪರಿಸ್ಥಿತಿಯಿದ್ದರೂ ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದಂತೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳನ್ನು ರಾಜ್ಯದ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಮುಕ್ತವಾಗಿ ಸಾಗಾಣಿಕೆ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ಕೊಡಲಾಗಿದೆ ಎಂದರು.

ಕೃಷಿ ಉತ್ಪನ್ನಗಳ ಸುಗಮ ಮಾರಾಟ ಮತ್ತು ಸಾಗಾಣಿಕೆಗೆ ಅಂತರರಾಜ್ಯ ನಿರ್ಬಂಧಗಳನ್ನು ಕೂಡ ತೆಗೆದು ಹಾಕಲಾಗಿದೆ. ಆದಾಗ್ಯೂ ಕೆಲವು ಕಡೆಗಳಿಂದ ದೂರುಗಳು ಬರುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತೊಂದರೆ ನೀಡುವಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದರು.

ಸಾಮಾಜಿಕ ಅಂತರ, ಮುಂಜಾಗ್ರತೆ ಅನಿವಾರ್ಯ

ರಾಜ್ಯದ ರೈತರ ಹಿತ ಕಾಪಾಡುವುದು ಹಾಗೂ ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸದ್ಯಕ್ಕೆ ಕೊರೊನಾ ನಿಯಂತ್ರಣ ಮತ್ತು ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಹಠಾತ್ತಾಗಿ ಬಂದಿರುವಂತಹ ಈ ಪರಿಸ್ಥಿತಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಕಾರಣ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ರೈತರು ಕೂಡ ಕೃಷಿ ಚಟುವಟಿಕೆ ಕೈಗೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ, ಸರ್ಕಾರ ಸೂಚಿಸಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.

ವದಂತಿಗಳಿಗೆ ಕಿವಿಗೊಡಬೇಡಿ

ಕಲ್ಲಂಗಡಿ ಹಣ್ಣಿನ ಕುರಿತು ಮತ್ತು ಹಕ್ಕಿ ಜ್ವರದ ಅಪಪ್ರಚಾರದಿಂದಾಗಿ ಕಲ್ಲಂಗಡಿ ಹಣ್ಣು ಮತ್ತು ಕೋಳಿ ಸಾಕಾಣಿಕೆ ಮತ್ತು ಮಾರಾಟಕ್ಕೆ ಅಡ್ಡಿಯಾಗಿದೆ. ಜನರು ಇಂತಹ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಸಚಿವರು, ಕಲ್ಲಂಗಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ಕೋಳಿ ಮಾಂಸ, ಮೀನು ಸೇವನೆಯಿಂದಲೂ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ 957 ಕೋಟಿ ರೂ. ಬಿಡುಗಡೆ

ಪ್ರಧಾನಮಂತ್ರಿಗಳು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯಕ್ಕೆ 957 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದರಿಂದ 49 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ಅದರಂತೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 600 ಕೋಟಿ ರೂ. ಬಿಡುಗಡೆಯಾಗಿದ್ದು, ರೈತರ ಖಾತೆಗೆ 2000 ರೂ.ನಂತೆ ಜಮಾ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ನಕಲಿ ಬೀಜ ಮಾರಿದರೆ ಕಠಿಣ ಕ್ರಮ

ಶಾಸಕರಾದ ನರಸಿಂಹನಾಯಕ (ರಾಜೂಗೌಡ) ಅವರು ಮಾತನಾಡಿ, ಸುರಪುರ ತಾಲೂಕಿನಲ್ಲಿ ಮಂಗಳವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆಗಳು ಹಾಳಾಗಿವೆ. ಸರ್ವೇ ನಡೆಸಬೇಕು. ಅಲ್ಲದೇ, ನಕಲಿ ಬೀಜ ಮಾರಾಟದ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನಕಲಿ ಬೀಜ ಮಾರಾಟ ಮಾಡುವುದು ಕೊಲೆ ಮಾಡುವುದಕ್ಕಿಂತಲೂ ದೊಡ್ಡ ಅಪರಾಧ. ಇದರ ತಡೆಗಾಗಿ ವಿಜಿಲೆನ್ಸ್ ಕಮೀಟಿ ಇದ್ದು, ಎಷ್ಟೇ ಪ್ರಭಾವ ವ್ಯಕ್ತಿಗಳಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಜಿಲ್ಲೆಗೆ ರಸಗೊಬ್ಬರವನ್ನು ರೈಲ್ವೆ ಮೂಲಕ ಸಮರ್ಪಕವಾಗಿ ತರಿಸಿಕೊಳ್ಳಲು ರೈಲ್ವೆ ರೇಕ್ ಪಾಯಿಂಟ್ ಒದಗಿಸುವಂತೆ ಕೋರಿದರೆ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರಿಗೂ ಸಬ್ಸಿಡಿ ದರದಲ್ಲಿ ಭತ್ತದ ಬೀಜ ವಿತರಿಸಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರು ಜಿಲ್ಲೆಗೆ ಹಾಪ್‍ಕಾಮ್ಸ್ ಮಳಿಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

Leave a Reply

error: Content is protected !!
LATEST
ಮೈಕ್ರೋ ಫೈನಾನ್ಸ್ ಪ್ರಕರಣದಿಂದ ಸಾವು - ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿ ಎಂದ ಎಚ್‌ಡಿಕೆ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಕ್ಕೆ ಕಠಿಣ ನಿಯಮ ರೂಪಿಸಿ: ಸಚಿವ ಶಿವರಾಜ್ ತಂಗಡಗಿ ಪಡಿತರ ಚೀಟಿಯಲ್ಲಿ ಕುಟುಂಬದವರ ಹೆಸರು ಸೇರ್ಪಡೆಗೆ ಅವಕಾಶ ನೀಡಿದ ಆಹಾರ ಇಲಾಖೆ ನಿವೃತ್ತ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: 7ನೇ ವೇತನ ಆಯೋಗದ ಪಿಂಚಣಿ ಮಂಜೂರು ಮಾಡಿ ಆದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ನೌಕರರಿಗೆ ಸಮಾನ ವೇತನ ಎಂದು ಹೇಳಿದ್ದೇವೆ: ಸಾರಿಗೆ ಸಚಿವ ರಾಮಲಿಂಗಾರೆ... ಚಲಿಸುತ್ತಿದ್ದ ಬಸ್‌ ಹತ್ತಲು ಹೋಗಿ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ 110 ಹಳ್ಳಿಗಳ ಕೊಳವೆ ಬಾವಿಗಳು ಜಲಮಂಡಳಿ ಸುಪರ್ದಿಗೆ: ತುಷಾರ್ ಗಿರಿನಾಥ್ ವಯನಾಡಲ್ಲಿ ಮಹಿಳೆ ಕೊಂದು ತಿಂದಿದ್ದ ಹೆಣ್ಣು ಹುಲಿ ಸಾವು ಬಡವರಿಗೆ ನೆರವಾಗುತ್ತಿವೆ ಪಂಚ ಗ್ಯಾರಂಟಿ ಯೋಜನೆಗಳು: ಸಚಿವ ಮಧುಬಂಗಾರಪ್ಪ