ಬೆಂಗಳೂರು: ಮೇ- ಜೂನ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಮಂಗಳವಾರ (ಜೂನ್ 20) ಪ್ರಕಟಗೊಂಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಪ್ರಕಟಿಸಿದೆ. ಮುಖ್ಯ ಪರೀಕ್ಷೆಯಂತೆ ಇಂದು ಪ್ರಕಟವಾದ ಪೂರಕ ಪರೀಕ್ಷೆಯಲ್ಲೂ ಬಾಲಕರನ್ನು ಹಿಂದಿಕ್ಕಿರುವ ಬಾಲಕಿಯರು ಮತ್ತೆ ಮೇಲುಗೈ ಸಾಧಿಸಿದ್ದಾರೆ.
ಪೂರಕ ಪರೀಕ್ಷೆಯಲ್ಲಿ 1,57,756 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 50,478 ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ 32% ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆ ಬರೆದವರಲ್ಲಿ 28,901 ಬಾಲಕರು (30.22%) ಹಾಗೂ 21,577 ಬಾಲಕಿಯರು (34.75%) ತೇರ್ಗಡೆಯಾಗಿದ್ದಾರೆ.
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು ಜೂನ್ 26 ಕೊನೆ ದಿನವಾಗಿದೆ. ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆಗೆ ಜೂನ್ 30 ಅಂತಿಮ ದಿನ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಇನ್ನು ಪರೀಕ್ಷಾ ಫಲಿತಾಂಶ ಇಲಾಖೆ ವೆಬ್ ಸೈಟ್‌ನಲ್ಲಿ ಲಭ್ಯವಿದ್ದು, ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ: https://karresults.nic.in/slpusuppfirst.asp