
ಬೆಂಗಳೂರು ಗ್ರಾಮಾಂತರ: ನರೇಗಾ ಯೋಜನೆಯಡಿ ಕೆಲಸಕ್ಕಾಗಿ ನೋಂದಾಯಿಸಿಕೊಂಡ ಮಹಿಳಾ ಕೂಲಿಕಾರರಲ್ಲಿ ಶೇ.52 ರಷ್ಟು ಮಾತ್ರ ಭಾಗವಹಿಸುತ್ತಿದ್ದು, ಹಲವು ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದರೂ ಶೇ.55 ರಷ್ಟು ತಲುಪಲು ಸಾಧ್ಯವಾಗಿಲ್ಲ. ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಿಸಲು 3 ತಿಂಗಳ ಕಾಲ ಸ್ತ್ರೀ-ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ತಿಳಿಸಿದರು.
ಇಂದು ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಶೇ.10 ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹೊಸಕೋಟೆ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಹಮ್ಮಿಕೊಂಡಿದ್ದ 3 ತಿಂಗಳರವರೆಗೆ ‘ಸ್ತ್ರೀ ಚೇತನ ಅಭಿಯಾನ’ದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 100 ದಿನ ಪೂರೈಸಿರುವ ಮಹಿಳೆಯರಿಗೆ ಹೊಸಕೋಟೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಾರಾಯಣ ಸ್ವಾಮಿ ಸನ್ಮಾನಿಸಿ ಮಾಡಿದರು.
ವಿವಿಧ ಜಾಗೃತಿ ಕಾರ್ಯಕ್ರಮಗಳು * ರಂಗೋಲಿ ಸ್ವರ್ಧೆ * ವೈಯಕ್ತಿಕ ಕಾಮಗಾರಿಗಳ ಅರಿವು ಮತ್ತು ಫಲಾನುಭವಿಗಳಗೆ ಆದೇಶ ಪತ್ರ ವಿತರಣೆ * ಮಹಿಳಾ ಕೂಲಿ ಕಾರ್ಮಿಕರಿಗೆ ಗ್ರಾಮೀಣ ಕ್ರೀಡಾ ಕೂಟ ಅಯೋಜನೆ * ಅರೋಗ್ಯ ತಪಾಸಣಾ ಶಿಬಿರ.
ಈ ಎಲ್ಲ ಕಾರ್ಯಕ್ರಮಗಳಿಂದ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಶೇ.10 ರಷ್ಟು ಹೆಚ್ಚಿಸುವುದು ಹಾಗೂ ಮಹಿಳಾ ಕಾಯಕ ಬಂಧುವಿಗೆ ಪ್ರೋತ್ಸಾಹಧನ ಕಡ್ಡಾಯವಾಗಿ ಪಾವತಿಸುವ ಉದ್ದೇಶ ಹೊಂದಲಾಗಿದೆ. ಅರ್ಹ ಮಹಿಳಾ ಕೂಲಿಕಾರರಿಗೆ ಜಾಗೃತಿ ಮೂಡಿಸುವುದು, ಮೂರು ತಿಂಗಳ ಕಾಲ ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ನೀಡಲು ಕಾಮಗಾರಿಗಳನ್ನು ಸಿದ್ಧತೆ ಮಾಡಿ ಕೊಳ್ಳುವುದು.
ಗ್ರಾಪಂ ಮಟ್ಟದ ಚುನಾಯಿತ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ಆಹ್ವಾನಿಸಬೇಕು. ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿಶೇಷ ಪ್ರಯತ್ನಗಳನ್ನು ನಡೆಸುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಭಿಯಂತರರು, ಗ್ರಾಮ ಕಾಯಕ ಮಿತ್ರರಿಗೆ ಹಾಗೂ ಸಿಬ್ಬಂದಿಗೆ ಸನ್ಮಾನಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅರ್ಹ ಪಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, MVJ ಮೆಡಿಕಲ್ ಕಾಲೇಜಿನ ವೈದ್ಯರು, ಸ್ವ ಸಹಾಯ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಮಕ್ಕಳು, ಆಶಾ ಕಾರ್ಯ ಕರ್ತೆಯರು ಹಾಗೂ ನರೇಗಾ ಕೂಲಿ ಕಾರರು ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗದವರು ಇದ್ದರು.