30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ 4 ಮಂದಿ ಸಾವು, 14ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಡೆಹ್ರಾಡೂನ್: 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮ (ಎಚ್‌ಆರ್‌ಟಿಸಿ) ಬಸ್ವೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ವಿಕಾಸನಗರ ಪ್ರದೇಶದಲ್ಲಿ ನಡೆದಿದೆ.

ಕ್ವಾನು ಪ್ರದೇಶದ ಸುಡೋಯ್ ಖಾದ್ ಬಳಿ ಬಸ್ ಅಪಘಾತ್ಕಕೀಡಾಗಿದೆ. ಬಸ್ ಹಿಮಾಚಲ ಪ್ರದೇಶದ ಚೌಪಾಲ್- ನೆರ್ವಾದಿಂದ ಪೌಂಟಾ ಸಾಹಿಬ್‌ಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಅವಘಡದಿಂದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನು 14ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಯಾಸ್ಮಿನ್ ಬೇಗಂ(46), ರಿಚಾ(30), ಧನ್ ಬಹದ್ದೂರ್ ಮತ್ತು ಬಸ್ ಚಾಲಕ ದಿನೇಶ್ ಕುಮಾರ್ (54) ಮೃತಪಟ್ಟವರು.
ಮಿನಾಸ್-ಕ್ವಾನು-ಹರಿಪುರ್ ರಸ್ತೆಯ ಸುಡೋಯ್ ಖಾಡ್ ಬಳಿ ಟ್ರಕ್‌ಗೆ ದಾರಿ ಮಾಡಿಕೊಡುವಾಗ ಬಸ್ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದರು.
ಇನ್ನು ಇತ್ತ ಅಪಾಘತದ ವಿಷಯ ತಿಳಿಯುತ್ತಿದ್ದಂತೆ ಎಸ್ಡಿಆರ್ಎಫ್ನ ದಕ್ಪಥರ್, ಚಕ್ರತ, ಮೋರಿ ಮತ್ತು ತ್ಯುನಿ ಘಟಕದ ಸಿಬ್ಬಂದಿಗಳನ್ನು ತಕ್ಷಣಕ್ಕೆ ಸ್ಥಳಕ್ಕೆ ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಾಗಿದೆ ಎಂದು ಎಸ್ಡಿಆರ್ಎಫ್ ಕಮಾಂಡೆಂಟ್ ಅರ್ಪನ್ ಯದುವಂಶಿ ತಿಳಿಸಿದ್ದಾರೆ.
ಸಿಎಂ ಪುಷ್ಕರ್ ಸಿಂಗ್ ಧಾಮಿ ಘಟನೆ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಎಲ್ಲ ಕ್ರಮ ಕೈಗೊಂಡು, ಪ್ರಯಾಣಿಕರನ್ನು ರಕ್ಷಿಸುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಧಾಮಿ, ಅಪಘಾತ ಸ್ಥಳದ ಸುತ್ತಮುತ್ತಲಿನ ಪ್ರದೇಶದ ಎಲ್ಲ ವೈದ್ಯಕೀಯ ಕೇಂದ್ರಗಳಿಗೆ ಗಾಯಗೊಂಡ ಪ್ರಯಾಣಿಕರನ್ನು ಆದ್ಯತೆ ಮೇರೆಗೆ ದಾಖಲಿಸಿ, ಚಿಕಿತ್ಸೆ ನೀಡುವಂತೆ ಆದೇಶ ಮಾಡಿದ್ದಾರೆ.
ಜಿಲ್ಲಾ ಆಡಳಿತ ಮತ್ತು ಪೊಲೀಸರು ರಕ್ಷಣಾ ಮತ್ತು ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಸುತ್ತಮುತ್ತಲಿನ ಆಸ್ಪತ್ರೆಗಳಿಗೂ ಆಲರ್ಟ್ ಆಗಿರುವಂತೆ ಸೂಚನೆ ನೀಡಿದ್ದು, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಏರ್ಲಿಫ್ಟ್ ಮಾಡಲಾಗುವುದು. ಎಲ್ಲ ಪ್ರಯಾಣಿಕರ ಸುರಕ್ಷತೆಗೆ ಪ್ರಾರ್ಥಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
Related









