ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಒಟ್ಟು 43 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಕೋವಿಡ್ -19 ರ ಪರಿಹಾರ ನಿಧಿಯ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಸ್ತಾಂತರಿಸಿದರು.
ಸಂಸ್ಥೆ ಸಾಮಾಜಿಕ ಜವಬ್ಧಾರಿಯಡಿಯಲ್ಲಿ (ಸಿ.ಎಸ್.ಆರ್) 25 ಕೋಟಿ ರೂ. ಹಾಗೂ ಕ.ವಿ.ಪ್ರ.ನಿ.ನಿ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿ ಹಾಗೂ ನೌಕರರ ಎರಡು ದಿನದ ಸಂಬಳದಿಂದ ಕ್ರೋಡಿಕರಿಸಿದ 18 ಕೋಟಿ ರೂ. ಸೇರಿ ಒಟ್ಟು 43 ಕೋಟಿ ರೂ.ಗಳನ್ನು ಶನಿವಾರ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಕೊರೊನಾದಿಂದ ರಾಜ್ಯದಲ್ಲಿಯೂ ಜನರು ತತ್ತರಿಸುತ್ತಿದ್ದು ಅವರಿಗೆ ತಮ್ಮ ಕೈಲಾದ ನೆರವು ನೀಡುವ ದೃಷ್ಟಿಯಿಂದ ಸಂಸ್ಥೆಯ ಎಲ್ಲಾ ನೌಕರರ ನೆರವಿನಿಂದ ದೇಣಿಗೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಪರಿಹಾರ ನಿಧಿಗೆ ವಿವಿಧ ಸಂಘಸಂಸ್ಥೆಗಳು, ಉದ್ಯಮಿಗಳು ಉದಾರವಾದ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ದೇಶದ ಇಂದಿನ ಸ್ಥಿತಿಯನ್ನು ಅರಿತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ನೌಕರರು ದೇಣಿಗೆ ನೀಡುತ್ತಿದ್ದಾರೆ ಎಂದು ಸಿಎಂ ಬಿಎಸ್‌ವೈ ತಿಳಿಸಿದರು.
ನಿಗಮದ ನೌಕರರ ತಮ್ಮ ಪರಿಸ್ಥಿತಿ ಏನೇ ಇದ್ದರು ದೇಶದ ಹಿತದೃಷ್ಟಿಯಿಂದ ದೇಣಿಗೆ ನೀಡಿದ್ದಾರೆ. ಈ ಮೂಲಕ ಮೊದಲು ದೇಶ ನಂತರ ನಾವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಶ್ಲಾಘಿಸಿದರು.
ವ್ಯವಸ್ಥಾಪಕ ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ನಿರ್ದೇಶಕರು (ಪ್ರಸರಣ), ನಿರ್ದೇಶಕರು (ಹಣಕಾಸು), ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೆ.ಇ.ಬಿ. ಇಂಜಿನಿಯರ್‌ಗಳ ಸಂಘ, ಕ.ವಿ.ಪ್ರ.ನಿ.ನಿ.ದ ನೌಕರರ ಸಂಘ ಮತ್ತು ಲೆಕ್ಕಾಧಿಕಾರಿಗಳು ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.