ಬೆಳಗಾವಿ: ಜಿಲ್ಲೆಯ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಹಾಗೂ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ (ಪಾಸಿಟಿವ್) ಸದರಿ ಗ್ರಾಮದ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವಾಗುವವರೆಗೆ ನಿಷೇಧಿತ (ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಸಂಕೇಶ್ವರ ಪಟ್ಟಣ ಹಾಗೂ ಯಳ್ಳೂರ ಗ್ರಾಮದ ನಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಗ್ರಾಮದ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ (Containment Zone) ಎಂದು ಘೋಷಿಸಲಾಗಿದೆ. ಅದರಂತೆ ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು (Buffer Zone) ಎಂದು ಘೋಷಿಸಲಾಗಿದೆ.
ಗ್ರಾಮ ಮತ್ತು ಪಟ್ಟಣದ 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ/ ಜನರು ಕಾಲ್ನಡಿಗೆ, ಇನ್ಯಾವುದೋ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯ ನಿರತ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶವಾಗುವರೆಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿಕೊಂಡು ಬರಬೇಕು, ಸದರಿ ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ನಿವಾಸಿಗಳು ತಮ್ಮ ಬಡಾವಣಿಯ ಓಣಿಯ ಗಲ್ಲಿಯಲ್ಲಿ ಶುಚಿತ್ವವನ್ನು ತಪ್ಪದೆ ಕಾಪಾಡಿಕೊಂಡು ಬರಬೇಕು ಎಂದು ಹೇಳಿದ್ದಾರೆ.
ನಿಷೇಧಿತ ಪ್ರದೇಶಗಳ 3 ಕೀ.ಮೀ. ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಉರುಸು, ಮದುವೆ, ಕ್ರೀಡೆ, ಸಂತೆ, ಜಾತ್ರೆ, ಸಮ್ಮೇಳನ,ನಾಟಕೋತ್ಸವ, ವಿಚಾರ ಗೋಷ್ಠಿ ಮುಂತಾದವುಗಳ ಜರುಗಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇಧಿತ ಪ್ರದೇಶದಲ್ಲಿನ ಎಲ್ಲಾ ಕಚೇರಿಗಳು (ಸರಕಾರಿ ಕಚೇರಿಗಳನ್ನು ಹೊರತುಪಡಿಸಿ), ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು (ದಿನಸಿ, ಹಾಲು, ಹಣ್ಣು, ತರಕಾರಿ ಮತ್ತು ಔಷಧಿ ಅಂಗಡಿಗಳು ಹೊರತುಪಡಿಸಿ) ಮುಚ್ಚುವುದು.
ಈ ಎರಡೂ ಪ್ರದೇಶಗಳಲ್ಲಿನ ಎಲ್ಲಾ ಮನೆಗಳಲ್ಲಿರುವ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ. ಸದರಿ ಪ್ರದೇಶದಲ್ಲಿರುವ ಎಲ್ಲಾ ಮನೆಗಳ ಸದಸ್ಯರು ಗೃಹ ಸಂಪರ್ಕ ತಡೆ (HomeQuarantine) ಯಲ್ಲಿರುವುದು.
ಗ್ರಾಮದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯವನ್ನು ಆರೋಗ್ಯ ಇಲಾಖೆಯು ತಂಡಗಳನ್ನು ರಚಿಸಿಕೊಂಡು ಪರಿಶೀಲಿಸಬೇಕು. ಆದೇಶ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಲು ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತು ಯಳ್ಳೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೋಡಲ್ ಅಧಿಕಾರಿ ಎಂದು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ.