11ದಿನದಲ್ಲಿ 7ಜನ ಸಾರಿಗೆ ನೌಕರರ ಆತ್ಮಹತ್ಯೆ: ಆದರೂ ಕಲ್ಲಾಗಿರುವ ಸರ್ಕಾರ, ಸಚಿವರ ಮನಸ್ಸು
ನೌಕರರ ಸಾವಿಗೆ ಯಾರು ಹೊಣೆ l ಮೃತ ನೌಕರರ ಕುಟುಂಬಕ್ಕೆ ನೆರವಾಗುವವರು ಯಾರು?
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನವೂ ಮುಂದುವರಿದಿದ್ದು, ಈ ನಡುವೆ ಕಳೆದ 11ದಿನದಿಂದ ಒಟ್ಟು 7 ಜನ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ನೌಕರರ ಸಾವಿನ ಮೇಲೆಯೇ ಸೌಧ ಕಟ್ಟುವ ರೀತಿ ವರ್ತಿಸುತ್ತಿದೆ. ಇಂಥ ನಡೆ ಸರ್ಕಾರಕ್ಕೆ ಶೋಭೆ ತರುವಂತದಲ್ಲ.
ಇನ್ನಾದರೂ ಮುಷ್ಕರ ನಿರತ ನೌಕರರ ಜತೆ ಸಭೆ ನಡೆಸಿ ಒಂದು ಒಪ್ಪಂದಕ್ಕೆ ಬಂದು ಅವರ ಬೇಡಿಕೆ ಆಲಿಸುವತ್ತ ಸಮಸ್ಯೆ ಪರಿಹಾರಕ್ಕೆ ಒಂದು ಅಂತ್ಯ ಕಾಣಿಸಬೇಕು ಎಂಬುವುದು ನಮ್ಮ ಆಗ್ರಹ.
ಒಂದು ಕಡೆ ಕೊರೊನಾ ಇನ್ನೊಂದು ಕಡೆ ಸರ್ಕಾರ ಹಠ ಮಾಡುತ್ತಿದೆ. ಈ ನಡುವೆ ವೇತನ ಇಲ್ಲದೆ ನೌಕರರ ಜೀವನದಲ್ಲಿ ಏರುಪೇರಾಗುತ್ತಿದ್ದು, ಅವರ ಸಮಸ್ಯೆ ಕೇಳಿಸಿಕೊಳ್ಳದಷ್ಟು ನಿಕೃಷ್ಟವಾದ ರೀತಿಯಲ್ಲಿ ನಡೆದುಕೊಳ್ಳುವ ಈ ಸರ್ಕಾರದ ನಡೆ ಬಗ್ಗೆ ಜನ ತಿರುಗಿ ಬೀಳುವ ಸಮಯ ಬಹಳ ದೂರವಿಲ್ಲ. ಇಂದೋ ನಾಳೆಯೋ ನಿಮಗೆ ಬುದ್ಧಿ ಕಲಿಸುತ್ತಾರೆ. ಇನ್ನಾದರೂ ಸರ್ಕಾರ ನಡೆಸುತ್ತಿರುವ ಜನ ಪ್ರತಿನಿಧಿಗಳು ಎನಿಸಿಕೊಂಡ ತೊಘಲಕ್ ಸಂತತಿಯವರು ಎಚ್ಚೆತ್ತಿಕೊಳ್ಳಬೇಕು.
ಇಲ್ಲವಾದರೆ ನಿಮ್ಮ ಸಮಾಧಿಯನ್ನು ಜನರೇ ಸಾರಿಗೆ ನೌಕರರ ಜತೆ ಸೇರಿ ಮಾಡುತ್ತಾರೆ. ಒಂದು ಕಡೆ ಜನರಿಗೂ ತುಂಬ ತೊಂದರೆಯಾಗುತ್ತಿದೆ. ಇತ್ತ ನೌಕರರ ಕುಟುಂಬ ನಿರ್ವಾಹಣೆಗೂ ಸಾಲದ ರೀತಿ ವೇತನ ಕೊಡುತ್ತಿದ್ದೀರ. ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾ?
ಇನ್ನು ಹೊರಗಡೆ ದುಡಿದು ತರುವ ನೌಕರರಿಗೆ ಕಡಲೆಕಾಯಿ ತೆಗೆದುಕೊಳ್ಳಲು ಸಾಲದಷ್ಟು ವೇತನ ಕೊಡುತ್ತೀರಿ ಎಸಿ ಕಚೇರಿಯಲ್ಲಿ ಕಾಲುಮೇಲೆ ಕಾಲುಹಾಕಿಕೊಂಡು ಕುಳಿತುಕೊಳ್ಳುವ ಅಧಿಕಾರಿಗಳಿಗಳಿಗೆ ಹಾಸಿ ಹೊದ್ದಿಕೊಳ್ಳುವಷ್ಟು ವೇತನ ಕೊಡುತ್ತೀರಿ. ಇದು ಸರಿಯಾದ ನ್ಯಾಯವ. ಇದು ಏಕೆ ನಿಮಗೆ ತಿಳಿಯುತ್ತಿಲ್ಲ. ನೀವು ಅಧಿಕಾರ ನಡೆಸಲು ಬಂದಿದ್ದೀರ? ಇಲ್ಲ ಸಮಾಜ ಸೇವೆ ಮಾಡಲು ಬಂದಿದ್ದೀರಾ? ಒಮ್ಮೆ ಸಿಎಂ ಮತ್ತು ಎಲ್ಲಾ ಸಚಿವರು ಹಾಗೂ ಜನ ಪ್ರತಿನಿಧಿಗಳು ಕನ್ನಡಿ ಮುಂದೆ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ .
ಇಷ್ಟೆಲ್ಲ ಹೇಳಿದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರೆ ನೀವು ಸಮಾಜ ಸೇವೆ ಮಾಡಲು ಅರ್ಹರಲ್ಲ ಎಂಬುದನ್ನು ನೀವೇ ಸಾಬೀತುಪಡಿಸಿಕೊಂಡಂತೆ.